ಕೇರಳ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗುವ ಸಾಧ್ಯತೆಯಿದೆ. ಬಹುಕೋಟಿ ಸೋಲಾರ್ ಹಗರಣದಲ್ಲಿ ಭ್ರಷ್ಟಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲು ಕೇರಳ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಕೇರಳ ಸಿಎಂ ಪಿಣರಾಯಿ ವಿಜಯನ್, ಸರಿತಾ ನಾಯರ್ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆದಿದೆ. ಹೀಗಾಗಿ ಸರಿತಾ ನಾಯರ್ ಪತ್ರದಲ್ಲಿ ಯಾರ ಹೆಸರನ್ನು ಬರೆದಿದ್ದಾರೋ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.
ಸರ್ಕಾರಕ್ಕೆ ಸೋಲಾರ್ ತನಿಖಾ ಆಯೋಗದ ವರದಿ ಬಂದಿದ್ದು, ಆರೋಪಿ ಸರಿತಾ ಪತ್ರದಲ್ಲಿ ಉಲ್ಲೇಖ ಮಾಡಿರುವ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಬಹುದು ಎಂದು ಹೇಳಿದೆ. ಲೈಂಗಿಕ ಬಯಕೆ ಈಡೇರಿಸುವಂತೆ ಬೇಡಿಕೆ ಇಡುವುದು ಭ್ರಷ್ಟಾಚಾರದ ಭಾಗವೆಂದು ಪರಿಗಣಿಸಲಾಗಿದೆ. ಈ ವರದಿಯನ್ನೇ ಆಧರಿಸಿ ಕಾಂಗ್ರೆಸ್‍ಗೆ ಶಾಕ್ ನೀಡಲು ಕೇರಳದ ಎಡಪಕ್ಷಗಳ ಸರ್ಕಾರ ಮುಂದಾಗಿದೆ.
ಮಾಧ್ಯಮಗಳಿಗೆ ಸೋರಿಕೆಯಾಗಿರುವ ಮಾಹಿತಿ ಪ್ರಕಾರ ಸರಿತಾ ನಾಯರ್ ಬರೆದಿರುವ ಪತ್ರದಲ್ಲಿ, ಮಾಜಿ ಸಿಎಂ ಉಮ್ಮಾನ್ ಚಾಂಡಿ, ಸಂಸದ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಹೈಬಿ ಈಡನ್, ಅರ್ಯಾಡನ್ ಮೊಹಮ್ಮದ್, ಅಡೂರ್ ಪ್ರಕಾಶ್ ಸೇರಿದಂತೆ ಹಲವರ ಹೆಸರಿದೆ ಎನ್ನಲಾಗಿದೆ.