ಕಾಯನ್‌ಕುಲಂ(ಕೇರಳ): ಮನುಪ್ರಸಾದ್ ಎನ್ನುವ ಪ್ರಯಾಣಿಕ ಚೆಂಗಂಕುಲಕರದಿಂದ ಕಾಯನ್‌ಕುಲಂ ನಗರಕ್ಕೆ ಹತ್ತಿರವಿರುವ ಹರಿಪಾಡ್‌ಗೆ ಸರ್ಕಾರಿ ಬಸ್ ಹತ್ತಿದ್ದರು. ಮಹಿಳಾ ಪ್ರಯಾಣಿಕಳು ಕುಳಿತಿದ್ದ ಸೀಟಿನ ಪಕ್ಕದ ಸೀಟು ಖಾಲಿಯಿತ್ತು. ಮನು ಪ್ರಸಾದ್ ಆ ಸೀಟಿನಲ್ಲಿ ಕುಳಿತುಕೊಂಡಿದ್ದಾರೆ. ಮಹಿಳೆ ಕೋಪಗೊಂಡು ಮತ್ತೊಂದು ಸೀಟಿಗೆ ತೆರಳಿದ್ದಾಳೆ
ಕಾಯನ್‌ಕುಲಂ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿರುವ ಪತಿಗೆ ಮಹಿಳೆ ಫೋನ್ ಮಾಡಿ ಘಟನೆ ಬಗ್ಗೆ ತಿಳಿಸಿದ್ದಾಳೆ. ತರುವಾಯ, ಕಾಯನ್‌ಕುಲಂ ಪೊಲೀಸರು ಹರಿಪಾಡ್ ಬಸ್ ನಿಲ್ದಾಣದಲ್ಲಿ ಮನುಪ್ರಸಾದ್ ಅವರನ್ನು ಬಂಧಿಸಿದ್ದಾರೆ. ಮನುಪ್ರಸಾದ್ ತಪ್ಪೆಸಗಿಲ್ಲ ಎಂದು ಸಹ ಪ್ರಯಾಣಿಕರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಪೊಲೀಸರು ಸಹಪ್ರಯಾಣಿಕರ ಹೇಳಿಕೆಗೆ ಕ್ಯಾರೆ ಎನ್ನದೆ ಮನುಪ್ರಸಾದ್ ಅವರನ್ನು ಬಂಧಿಸಿದ್ದಾರೆ. ನಂತರ ಪೊಲೀಸರು ಮರುದಿನ ವಿಚಾರಣೆಗೆ ಬರಬೇಕು ಎಂದು ಮನುಪ್ರಸಾದ್‌ಗೆ ತಿಳಿಸಿದ್ದಾರೆ. ಸಂಬಂಧಪಟ್ಟ ಮಹಿಳೆ ಕೂಡಾ ಪೊಲೀಸ್ ಠಾಣೆಗೆ ಬರಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಮಹಿಳೆ ವಿಚಾರಣೆಗೆ ಗೈರುಹಾಜರಾಗಿದ್ದಾರೆ.
ಮನುಪ್ರಸಾದ್ ಮಾತನಾಡಿ “ನನ್ನ ವಿರುದ್ಧ ಯಾವುದೇ ಆರೋಪವಿಲ್ಲ. ನನ್ನ ಕೈ ಕೂಡ ಮಹಿಳೆಯನ್ನು ಮುಟ್ಟಲಿಲ್ಲ. ಆದಾಗ್ಯೂ ಪೊಲೀಸರಿಗೆ ಯಾಕೆ ದೂರು ನೀಡಿದ್ದಾಳೆ ಗೊತ್ತಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಮಾತ್ರ, ಮಹಿಳೆ ನಮಗೆ ಆರೋಪಿಯ ವಿರುದ್ಧ ದೂರು ನೀಡಿದ್ದರಿಂದ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಮಹಿಳಾ ದೌರ್ಜನ್ಯಕ್ಕೆ ಬಲಿಯಾಗುವ ಪುರುಷರಿಗೆ ನೆರವು ನೀಡಲು ಯಾರು ಮುಂದಾಗದಿರುವುದು ವಿಷಾದನೀಯ ಸಂಗತಿಯಾಗಿದೆ.