ಸಿಂಗಾಪುರ : ಸಿಂಗಾಪುರದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ಥರ್ಮನ್ ಷಣ್ಮುಗರತ್ನಂ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಬರೆದುಕೊಂಡಿರುವ ಮೋದಿ, ಅಧ್ಯಕ್ಷರಾಗಿ ಆಯ್ಕೆಯಾದ ನಿಮಗೆ ಅಭಿನಂದನೆಗಳು. ಭಾರತ ಹಾಗೂ ಸಿಂಗಾಪುರ ನಡುವಿನ ಕಾರ್ಯತಂತ್ರ ಪಾಲುದಾರಿಕೆಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಿಮ್ಮೊಂದಿಗೆ ಕಾರ್ಯನಿರ್ವಹಿಸಲು ಬಯಸುತ್ತೇವೆ ಎಂದಿದ್ದಾರೆ.
ಶುಕ್ರವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಥರ್ಮನ್ ಷಣ್ಮುಗರತ್ನಂ ಭರ್ಜರಿ ಗೆಲುವು ಸಾಧಿಸಿ ಸಿಂಗಾಪುರದ 9ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಷಣ್ಮುಗರತ್ನಂ ಯಾರು?
ತಮಿಳುನಾಡು ಮೂಲದ ತಂದೆ ಹಾಗೂ ಚೀನಾ ಮೂಲದ ತಾಯಿಗೆ ಥರ್ಮನ್ ಷಣ್ಮುಗರತ್ನಂ 1957ರ ಫೆಬ್ರವರಿ 25ರಂದು ಸಿಂಗಾಪುರದಲ್ಲಿ ಜನಿಸಿದರು. ಅವರ ತಂದೆ ಕನಕರತ್ನಂ ಷಣ್ಮುಗರತ್ನಂ ಅವರು ಹೆಸರಾಂತ ರೋಗಶಾಸ್ತ್ರಜ್ಞ ಹಾಗೂ ಕ್ಯಾನ್ಸರ್ ಸಂಶೋಧಕರು. ತಾಯಿ ಗೃಹಿಣಿಯಾಗಿದ್ದರು.
ಥರ್ಮನ್ ಅವರು ಆಂಗ್ಲೋ-ಚೈನೀಸ್ ಶಾಲೆಯಲ್ಲಿ ವ್ಯಾಸಂಗ ಮಾಡಿ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ವುಲ್ಫ್ಸನ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಮಾಸ್ಟರ್ ಆಫ್ ಫಿಲಾಸಫಿ ಪದವಿಯನ್ನು ಪೂರ್ಣಗೊಳಿಸಿದರು.