Publish Date: Sat, 31 Oct 2020 (10:55 IST)
Updated Date: Sat, 31 Oct 2020 (10:57 IST)
ಚೆನ್ನೈ: ಭೂತ ಉಚ್ಛಾಟಿಸುವ ನೆಪದಲ್ಲಿ ವ್ಯಕ್ತಿಯೊಬ್ಬರಿಂದ 8 ಲಕ್ಷ ರೂ. ನಗದು, ಚಿನ್ನಾಭರಣ ದೋಚಿದ ಸ್ವಯಂ ಘೋಷಿತ ದೇವಮಾನವ ಮಹಿಳೆಯನ್ನು ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಶಿವಕುಮಾರ್ ಎಂಬ ವ್ಯಕ್ತಿ ಹಣ ಕಳೆದುಕೊಂಡವರು. ಇವರ ಪತ್ನಿ ಕೆಲವು ಸಮಯದ ಹಿಂದೆ ಸೀರೆಗೆ ಬೆಂಕಿ ತಗುಲಿ ಆಕಸ್ಮಿಕವಾಗಿ ತೀರಿಕೊಂಡಿದ್ದರು. ಈ ದುರ್ಘಟನೆಗೆ ಕಾರಣ ದುಷ್ಟ ಶಕ್ತಿಗಳು ಎಂದು ಶಿವಕುಮಾರ್ ನಂಬಿದ್ದರು. ಹೀಗಾಗಿ ಮನೆಯಲ್ಲಿ ದುಷ್ಟ ಶಕ್ತಿಯ ದೂರ ಮಾಡಲು ಆರೋಪಿ ನಾರಾಯಣಿಯನ್ನು ಮಾಟ ಮಂತ್ರ ಮಾಡಲು ಕರೆ ತಂದಿದ್ದರು. ಮನೆಗೆ ಬಂದಿದ್ದ ನಾರಾಯಣಿ ಶಿವಕುಮಾರ್ ಅವರ ಬಳಿಯಿದ್ದ ಚಿನ್ನಾಭರಣವಲ್ಲದೆ, ಅವರ ಮನೆಗೆ ಬಂದ ನೆಂಟರಿಷ್ಟರ ಚಿನ್ನಾಭರಣಗಳನ್ನೂ ಪಡೆದು ದುಷ್ಟ ಶಕ್ತಿ ಹೋದ ಬಳಿಕ ಚಿನ್ನಾಭರಣ ಮರಳಿಸುವುದಾಗಿ ನಂಬಿಸಿದ್ದಳು. ಆದರೆ ವರ್ಷ ಕಳೆದರೂ ಚಿನ್ನಾಭರಣ ಹಿಂತಿರುಗಿಸದೇ ಇದ್ದಾಗ ಸಂಶಯಗೊಂಡ ಶಿವಕುಮಾರ್ ಪೊಲೀಸರ ಮೊರೆ ಹೋಗಿದ್ದಾರೆ. ಇದೀಗ ಪ್ರಕರಣ ಸಂಬಂಧ ಪೊಲೀಸರು ಆರೋಪಿ ನಾರಾಯಣಿ ಮತ್ತು ಆಕೆಗೆ ಸಹಾಯ ಮಾಡಿದ್ದ ಇಬ್ಬರನ್ನು ಬಂಧಿಸಿದ್ದಾರೆ.