ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ 1581 ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಕೇಸ್‌ಗಳ ಬಗ್ಗೆ ನೀಡಿದ ಮಾಹಿತಿಯನ್ನು ನ್ಯಾಯಾಲಯದ ಮುಂದಿಡಿ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ.
1581 ಸಂಸದರು ಮತ್ತು ಶಾಸಕರ ವಿರುದ್ಧದ ಕೇಸ್‌ಗಳು ಒಂದು ವರ್ಷದಲ್ಲಿ ಇತ್ಯರ್ಥಗೊಂಡಿವೆಯೇ? ಹಾಗಾದಲ್ಲಿ ಎಷ್ಟು ಮಂದಿ ಅಪರಾಧಿಗಳಾಗಿದ್ದಾರೆ ಮತ್ತು ಎಷ್ಟು ಮಂದಿ ಬಿಡುಗಡೆಯಾಗಿರುವ ಬಗ್ಗೆ ವಿವರಣೆ ನೀಡುವಂತೆ ಸುಪ್ರೀಂಕೋರ್ಟ್ ಸರಕಾರಕ್ಕೆ ಸೂಚನೆ ನೀಡಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ರಂಜನ್ ಗೊಗೈ ಮತ್ತು ನವೀನ್ ಸಿನ್ಹಾ, ಕೇಂದ್ರ ಸರಕಾರಕ್ಕೆ ಸೂಚನೆ ನೀಡಿ ಆರು ವಾರದೊಳಗೆ 2014 ರಿಂದ ರಾಜಕಾರಣಿಗಳ ಮೇಲೆ ದಾಖಲಾದ ಕ್ರಿಮಿನಲ್ ಕೇಸ್‌ಗಳ ವಿವರಣೆ ನೀಡಿ ಎಂದು ಕೋರಿದೆ.
ಸುಪ್ರೀಂಕೋರ್ಟ್ ಮುಂದೆ ವಾದ ಮಂಡಿಸಿದ ಕೇಂದ್ರ ಸರಕಾರದ ಪರ ವಕೀಲರು, ರಾಜಕೀಯದಲ್ಲಿ ಅಪರಾಧಿಕರಣ ನಿಲ್ಲಬೇಕು ಎಂದು ಸರಕಾರ ಬಯಸುತ್ತದೆ. ರಾಜಕಾರಣಿಗಳು ಭಾಗಿಯಾಗಿರುವ ಪ್ರಕರಣಗಳನ್ನು ವೇಗವಾಗಿ ಇತ್ಯರ್ಥಗೊಳಿಸಲು ವಿಶೇಷ ಕೋರ್ಟ್ ಆರಂಭಿಸಲು ಸರಕಾರ ಬದ್ದವಾಗಿದೆ ಎಂದು ವಾದ ಮಂಡಿಸಿದ್ದಾರೆ.
ಕೇಂದ್ರ ಚುನಾವಣೆ ಆಯೋಗ ಮತ್ತು ಕಾನೂನು ಆಯೋಗ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಯಾದವರಿಗೆ ಅಜೀವ ನಿಷೇಧ ಹೇರಬೇಕು ಎಂದು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದು, ಸರಕಾರದ ಪರಿಗಣನೆಯಲ್ಲಿದೆ ಎಂದು ಕೇಂದ್ರದ ಪರ ವಕೀಲರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ರಾಜಕಾರಣಿಗಳ ವಿರುದ್ಧದ ಅಪರಾಧ ಪ್ರಕರಣಗಳ ಬಗ್ಗೆ ಆರು ವಾರದೊಳಗೆ ಸಂಪೂರ್ಣ ವಿವರವನ್ನು ಕೋರ್ಟ್‌ಗೆ ನೀಡಬೇಕು. ಡಿಸೆಂಬರ್ 13 ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಗಡುವು ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.