ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿದ ವರದಿಯ ಪ್ರಕಾರ.2015-16ರ ಆರ್ಥಿಕ ವರ್ಷದಲ್ಲಿ ದೇಶಾದ್ಯಂತ 32 ಪ್ರಾದೇಶಿಕ ಪಕ್ಷಗಳ ಆದಾಯ 221.48 ಕೋಟಿ ರೂ.ಗಳಿಗೆ ಏರಿಕೆಯಾಗಿದ್ದು, ಡಿಎಂಕೆ ಅಗ್ರಸ್ಥಾನದಲ್ಲಿದೆ.
2015-16ರ ಆರ್ಥಿಕ ವರ್ಷದಲ್ಲಿ 77.63 ಕೋಟಿ ರೂ. ಆದಾಯವನ್ನು ದಾಖಲಿಸಿ ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಶ್ರೀಮಂತ ಪ್ರಾದೇಶಿಕ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಎಐಎಡಿಎಂಕೆ (54.938 ಕೋಟಿ ರೂ.) ಮತ್ತು ತೆಲುಗು ದೇಶಂ ಪಾರ್ಟಿ (ಟಿಡಿಪಿ) ರೂ. 15.978 ಕೋಟಿ ರೂ ಆದಾಯ ಗಳಿಸಿ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನವನ್ನು ಪಡೆದಿದೆ.
ಏತನ್ಮದ್ಯೆ, ಬಿಹಾರದ ಜೆಡಿ (ಯು) ಪಕ್ಷ 23.46 ಕೋಟಿ ರೂ. ಖರ್ಚು ಮಾಡಿದ್ದರೆ, ಟಿಡಿಪಿ 13.107 ಕೋಟಿ ರೂ. ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) 11.094 ಕೋಟಿ ರೂ. ಖರ್ಚು ಮಾಡಿದೆ ಎಂದು ಮೂಲಗಳು ತಿಳಿಸಿವೆ.
32 ಪ್ರಾದೇಶಿಕ ಪಕ್ಷಗಳಲ್ಲಿ 14 ಪಕ್ಷಗಳು ತಮ್ಮ ಒಟ್ಟು ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡಿವೆ ಎಂದು ವರದಿ ತಿಳಿಸಿದೆ, ಅದರಲ್ಲಿ ಮೂರು ಪಕ್ಷಗಳು, ಜಾರ್ಖಂಡ್ ವಿಕಾಸ್ ಮೋರ್ಚಾ (ಪ್ರಜಾತಂತ್ರಿಕ್), ಜೆಡಿ (ಯು) ಮತ್ತು ರಾಷ್ಟ್ರೀಯ ಲೋಕ ದಳ ಪಕ್ಷಗಳ ಒಟ್ಟಾರೆ ಆದಾಯದ 200% ಪಟ್ಟು ವೆಚ್ಚ ಮಾಡಿವೆ. ಡಿಎಂಕೆ, ಎಐಎಡಿಎಂಕೆ ಮತ್ತು ಎಐಎಂಐಎಂ ಪಕ್ಷಗಳು ಆದಾಯದಲ್ಲಿ ಶೇ. 80 ರಷ್ಟು ವೆಚ್ಚ ಮಾಡಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆ ವರದಿಯಲ್ಲಿ ಬಹಿರಂಗಪಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.