ದೇಶದ ಆರ್ಥಿಕತೆ ಸುಭದ್ರವಾಗಿದ್ರೆ ಮರುಬಂಡವಾಳ ಹೂಡಿಕೆ ಘೋಷಣೆ ಯಾಕೆ? ಮಾಡಿದ್ದೀರಿ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಮಾಜಿ ವಿತ್ತಖಾತೆ ಸಚಿವ ಪಿ. ಚಿದಂಬರಂ ಗುಡುಗಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಸರಕಾರ ಭಾರತ್‌ಮಾಲಾ ಕಾರ್ಯಕ್ರಮದಲ್ಲಿ 6 ಲಕ್ಷ ಕೋಟಿ ರೂಪಾಯಿಗಳನ್ನು ಬ್ಯಾಂಕ್‌ಗಳಿಗೆ ಮರುಬಂಡವಾಳವಾಗಿ ನೀಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. ನೋಟು ನಿಷೇಧ ಮತ್ತು ಜಿಎಸ್‌ಟಿ ಜಾರಿಯಿಂದಾಗಿ ದೇಶದ ಆರ್ಥಿಕತೆ ವಿನಾಶವಾಗಿ ಹೋಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಳೆದ 2004 ಮತ್ತು 2009ರ ಅವಧಿಯಲ್ಲಿ ಆರ್ಥಿಕತೆ ಶೇ.8.5 ರಷ್ಟಿತ್ತು. ದೇಶದ ಇತಿಹಾಸದಲ್ಲಿಯೇ ಗರಿಷ್ಠ ಹಂತಕ್ಕೆ ತಲುಪಿತ್ತು. ಕಳೆದ 2014ರ ನಂತರ ಆರ್ಥಿಕತೆ ನಿಧಾನವಾಗಿ ಕುಸಿಯುತ್ತಾ ಬಂತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಸರಕಾರದ ನೋಟು ನಿಷೇಧ ತೀರ್ಮಾನದಿಂದ ದೇಶದ ಆರ್ಥಿಕತೆಗೆ ತೀವ್ರ ಧಕ್ಕೆಯಾಯಿತು. ನೋಟು ನಿಷೇಧದಿಂದ ಯಾವುದೇ ಕಪ್ಪು ಹಣ ಬಹಿರಂಗವಾಗಲಿಲ್ಲ. ನೋಟು ನಿಷೇಧದಿಂದ ಯಾವುದೇ ಲಾಭವಾಗಲಿಲ್ಲ. ಆದರೆ, ಆರ್ಥಿಕತೆ ಕುಸಿದು ಹೋಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನೋಟು ನಿಷೇಧ ತೀರ್ಮಾನದಿಂದ ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ವಿನಾಶವಾಗಿದ್ದರಿಂದ ಹೊಸ ಉದ್ಯೋಗ ಸೃಷ್ಟಿ ಸಾಧ್ಯವಾಗಲಿಲ್ಲ. ದೊಡ್ಡ ಉದ್ಯಮಗಳು ಉದ್ಯೋಗ ಸೃಷ್ಟಿಸುವುದಿಲ್ಲ. ಸಣ್ಣ ಮತ್ತು ಮಧ್ಯಮ ಉದ್ಯಮಗಳು ಉದ್ಯೋಗ ಸೃಷ್ಟಿಸುತ್ತವೆ ಎಂದು ಮಾಜಿ ವಿತ್ತ ಖಾತೆ ಸಚಿವ ಪಿ.ಚಿದಂಬರಂ ಮೋದಿ ಸರಕಾರದ ವಿರುದ್ಧ ವಾಕ್‌ಪ್ರಹಾರ್ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.