ಉತ್ತರಪ್ರದೇಶ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಲೆಯನ್ನು ಅರಗಿಸಿಕೊಳ್ಳಲಾಗದೆ ಹೀನಾಯ ಸೋಲನುಭವಿಸಿದ ಕಾಂಗ್ರೆಸ್, ರಾಹುಲ್ ಗಾಂಧಿಯವರ ಸರಳತೆ ಪ್ರಧಾನಿ ಮೋದಿಯನ್ನು ಸೋಲಿಸುತ್ತದೆ ಎಂದು ಹೇಳಿದೆ.
ಉತ್ತರಪ್ರದೇಶದ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜ್ ಬಬ್ಬರ್ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ವೇಳೆ ಪ್ರಧಾನಿ ಮೋದಿಯನ್ನು ಸೋಲಿಸುವುದೇ ಆದಲ್ಲಿ ಅದು ರಾಹುಲ್ ಗಾಂಧಿಯವರ ಸರಳತೆ ಮಾತ್ರ ಎಂದಿದ್ದಾರೆ.
ಇತ್ತೀಚೆಗೆ ನಡೆದ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್- ಸಮಾಜವಾದಿ ಪಕ್ಷದ ಮೈತ್ರಿಕೂಟ 56 ಸ್ಥಾನಗಳಿಸಿ ಹೀನಾಯ ಸೋಲನುಭವಿಸಿದೆ. ಬಿಜೆಪಿ ಮೈತ್ರಿಕೂಟದ ಪಕ್ಷಗಳು 403 ರಲ್ಲಿ 325 ಸೀಟುಗಳಲ್ಲಿ ಜಯಭೇರಿ ಬಾರಿಸಿವೆ. ಮಾಯಾವತಿ ಪಕ್ಷ ಕೇವಲ 19 ಸ್ಥಾನಗಳಲ್ಲಿ ಜಯಗಳಿಸಿತ್ತು.
ಉ.ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಹೊಣೆ ಹೊತ್ತ ರಾಜ್‌ಬಬ್ಬರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಉತ್ತರಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳ ಹೀನಾಯ ಸೋಲಿನ ನಂತರ ಮಾತನಾಡಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಕೆಲ ಬದಲಾವಣೆಗಳನ್ನು ತರಬೇಕಾಗಿದೆ ಎಂದು ಹೇಳಿದ್ದರೆ, ಕೆಲ ನಾಯಕರು ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.