ಬೆಂಗಳೂರು: ಲೋಕಸಭೆ ಚುನಾವಣೆಗೆ ಈ ಬಾರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕದಿಂದಲೇ ಸ್ಪರ್ಧಿಸುವ ಸಾಧ‍್ಯತೆಯಿದೆ.
ಕಳೆದ ಬಾರಿ ಅಮೇಠಿ ಜೊತೆಗೆ ರಾಹುಲ್ ಕೇರಳದ ವಯನಾಡಿನಲ್ಲೂ ಸ್ಪರ್ಧಿಸಿದ್ದರು. ಅಂತಿಮವಾಗಿ ವಯನಾಡಿನಲ್ಲಿ ಮಾತ್ರ ಅವರು ಗೆಲುವು ಕಂಡಿದ್ದರು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಗಳಲ್ಲೂ ಉತ್ತರ ಭಾರತದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಯಶಸ್ಸು ಸಿಕ್ಕಿಲ್ಲ.
ಹೀಗಾಗಿ ಕರ್ನಾಟಕ ಅಥವಾ ಕೇರಳದಿಂದ ಸ್ಪರ್ಧಿಸುವುದು ಸೂಕ್ತ ಎಂಬುದು ಕಾಂಗ್ರೆಸ್ ಅಭಿಪ್ರಾಯ. ಕರ್ನಾಟಕದಲ್ಲಿ ಸದ್ಯಕ್ಕೆ ಕಾಂಗ್ರೆಸ್ ಸರ್ಕಾರವಿದ್ದು, ಇಲ್ಲಿ ಪಕ್ಷದ ಹಿಡಿತ ಚೆನ್ನಾಗಿದೆ. ಹೀಗಾಗಿ ಈ ಬಾರಿ ಇಲ್ಲಿಂದಲೇ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯಲು ರಾಹುಲ್ ಗೆ ಎಡಪಕ್ಷಗಳು ಸಲಹೆ ನೀಡಿವೆ.
ಇತ್ತೀಚೆಗೆ ನಡೆದ ಪಂಚ ರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ ಸೋಲಾಗಿದ್ದು, ಅದರ ಮಿತ್ರ ಪಕ್ಷದ ಒಕ್ಕೂಟವಾದ ಇಂಡಿಯಾದಲ್ಲಿ ಬಿರುಕು ಮೂಡಿಸಿದೆ. ಈ ಬೆಳವಣಿಗೆ ಹಿನ್ನಲೆಯಲ್ಲಿ ಅವರು ಕರ್ನಾಟಕದಲ್ಲಿ ಸ್ಪರ್ಧಿಸುವ ಸಾಧ‍್ಯತೆ ಇಲ್ಲದಿಲ್ಲ.