ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಪುತ್ರನ ವಿರುದ್ಧ ಕೇಳಿ ಬಂದಿರುವ ವರದಿ ಬಗ್ಗೆ ಏನಾದರೂ ಮಾತನಾಡಿ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಗ್ರಹಿಸಿದ್ದಾರೆ.
ಎನ್ ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಮಿತ್ ಷಾ ಪುತ್ರ ಜೈ ಷಾ ಒಡೆತನದ ಕಂಪನಿಯ ವ್ಯವಹಾರ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಟೆಂಪಲ್ ಎಂಟರ್‌ಪ್ರೈಸಸ್‌ನ ಆದಾಯ ಒಂದು ವರ್ಷದ ಅವಧಿಯಲ್ಲಿ 50 ಸಾವಿರದಿಂದ 80 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ‘ದಿ ವೈರ್’ ಸುದ್ದಿತಾಣ ವರದಿ ಮಾಡಿದೆ. ಈ ಕುರಿತು ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಲಿ. ಮೋದಿಜಿ ನೀವು ಕಾವಲುಗಾರನಾ ಅಥವಾ ಆ ಕಂಪನಿಯ ಪಾಲುದಾರನಾ ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ಅಮಿತ್ ಷಾ ಪುತ್ರನ ವಿರುದ್ಧ ಆರೋಪ ಕೇಳಿ ಬಂದಿದ್ದು, ಕೂಡಲೇ ಷಾರನ್ನು ರಾಷ್ಟ್ರಾಧ್ಯಕ್ಷ ಸ್ಥಾನದಿಂದ ಬಿಜೆಪಿ ವಜಾಗೊಳಿಸಬೇಕು. ವರದಿ ಕುರಿತು ಕೂಡಲೇ ತನಿಖೆ ನಡೆಸುವಂತೆ ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸರ್ಜೆವಾಲಾ ಒತ್ತಾಯಿಸಿದ್ದಾರೆ.