ನವದೆಹಲಿ:ಬಾಹ್ಯಾಕಾಶ ವಿಜ್ಞಾನಿ ಹಾಗೂ ಮಾಜಿ ಇಸ್ರೋ ಮುಖ್ಯಸ್ಥ ಪ್ರೊ.ಯು.ಆರ್. ರಾವ್ ಅವರ ಅಗಲಿಕೆ ನೋವು ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ, ಯು.ಆರ್. ರಾವ್ ಅವರ ಅಗಲಿಕೆಯಿಂದ ಬಹಳ ನೋವಾಗಿದೆ. ಭಾರತದ ಬಾಹ್ಯಾಕಾಶದ ಯೋಜನೆಗಳಿಗೆ ರಾವ್ ಅವರ ಕೊಡುಗೆ ಅಪಾರ. ಅವರ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪ್ರೊ.ಯು.ಆರ್. ರಾವ್ ಅವರ ನಿಧನದ ಸುದ್ದಿ ಆಘಾತವನ್ನು ತಂದಿದೆ ಎಂದು ಸಂತಾಪ ಸೂಚಿಸಿದ್ದಾರೆ.
ಟ್ವಿಟರ್ ನಲ್ಲಿ ಶೋಕ ವ್ಯಕ್ತಪಡಿಸಿರುವ ಅವರು, ಯು.ಆರ್. ರಾವ್ ಅವರ ನಿಧನ ಸುದ್ಧಿ ಆಘಾತವನ್ನು ತಂದಿದ್ದು, ರಾವ್ ಅವರನ್ನು ಕಳೆದುಕೊಂಡ ನಾಡು ಇಂದು ಶೋಕತಪ್ತವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ. ಇಸ್ರೋವನ್ನು ಜಗತ್ತಿನ ಉತ್ಕೃಷ್ಟ ಬಾಹ್ಯಾಕಾಶ ಸಂಸ್ಥೆಯಾಗಿ ರೂಪಿಸುವಲ್ಲಿ ಯು.ಆರ್. ರಾವ್ ಅವರ ದೂರದರ್ಶಿತ್ವದ ಕೊಡುಗೆ ಅಪಾರವದಾದದ್ದು. ನಾಡು ಅವರ ಸಾಧನೆಗಳನ್ನು ಸದಾ ಸ್ಮರಿಸುತ್ತದೆ ಎಂದು ತಿಳಿಸಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತದ ಮೊದಲ ಉಪಗ್ರಹ ಆರ್ಯಭಟ ಉಡಾವಣೆಯ ನೇತೃತ್ವವಹಿಸಿದ್ದ ಯು.ಆರ್. ರಾವ್ ಅವರು ಇಂದು ಬೆಳಿಗ್ಗೆ ನಿಧರನಾಗಿದ್ದಾರೆ.