ನವದೆಹಲಿ: ಗುರುಗ್ರಾಂ ರ್ಯಾನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನಡೆದಿದ್ದ ವಿದ್ಯಾರ್ಥಿ ಪ್ರದ್ಯುಮ್ನ ಠಾಕೂರ್ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಪಿಯು ವಿದ್ಯಾರ್ಥಿ ಪರೀಕ್ಷೆ ಹಾಗೂ ಪೋಷಕರ ಸಭೆ ಮುಂದೂಡಲು ಬಾಲಕನ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಆರೋಪಿ ವಿದ್ಯಾರ್ಥಿಯನ್ನು ಬಂಧಿಸಿರುವುದಾಗಿ ಸಿಬಿಐ ಹೇಳಿದೆ. 2 ನೇ ತರಗತಿ ಬಾಲಕನ ಹತ್ಯೆಗೆ ಸಂಬಂಧಿಸಿದಂತೆ ಈ ಮೊದಲು ಬಸ್ ಕಂಡಕ್ಟರ್ ನನ್ನು ಬಂಧಿಸಲಾಗಿತ್ತು. ಆದರೆ ಕಂಡಕ್ಟರ್ ಈ ಕೊಲೆ ಮಾಡಿಲ್ಲ. 11ನೇ ತರಗತಿ ವಿದ್ಯಾರ್ಥಿ ಪರೀಕ್ಷೆ ಮುಂದೂಡಲು ಈ ಕೃತ್ಯವೆಸಗಿದ್ದಾನೆ ಎಂದು ಸಿಬಿಐ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡಿವೆ.
ಬಂಧಿತ ವಿದ್ಯಾರ್ಥಿ ಶಾಲೆಗೆ ತನ್ನೊಟ್ಟಿಗೆ ಚಾಕು ತೆಗೆದುಕೊಂಡು ಬರುತ್ತಿದ್ದ. ಕೆಲವೊಮ್ಮೆ ಈತನಿಗೆ ಮಾನಸಿಕ ಚಿಕಿತ್ಸೆಯೂ ಕೊಡಿಸಲಾಗಿದೆ. ತಾನು ತಂದಿದ್ದ ಚಾಕುವಿನಿಂದಲೇ ಬಾಲಕನ ಕತ್ತು ಸೀಳಿ ಶಾಲೆಯ ಬಾತ್ ರೂಂನಲ್ಲಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರು ಕೊಲೆಗೆ ಬಳಿಸಿರುವ ಚಾಕುವನ್ನು ವಶಕ್ಕೆ ಪಡೆದಿದ್ದಾರೆ.
ಅಂದಹಾಗೆ ಸೆ.8ರಂದು 2ನೇ ತರಗತಿ ವಿದ್ಯಾರ್ಥಿ ಪ್ರದ್ಯುಮ್ನ ಶವ ಶಾಲೆಯ ಶೌಚಾಲಯದಲ್ಲಿ ಪತ್ತೆಯಾಗಿತ್ತು. ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು.