ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಲೇ ಇದ್ದು ಮಂಗಳವಾರ ಹೈದರಾಬಾದಿನಲ್ಲೊಂದು ಪ್ರಕರಣ ಬೆಳಕಿಗೆ ಬಂದಿದೆ.
ಉತ್ತರಪ್ರದೇಶದ ಮೊರಾದಾಬಾದ್ ಮೂಲದ, ಪುಣೆಯಲ್ಲಿ ಕೆಲಸಕ್ಕೆ ನೇಮಕಗೊಂಡಿದ್ದ ಪೊಲೀಸ್ ಇನ್ಸಪೆಕ್ಟರ್ ಸ್ವಾತಿ (27) ಸಿಕಂದರಾಬಾದಿನ ಜವಾಹರನಗರದಲ್ಲಿ ತಮ್ಮ ಸ್ನೇಹಿತೆಯ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತರಬೇತಿ ನಿಮಿತ್ತ ಹೈದರಾಬಾದ್‌ನ ಎನ್‌ಐಎಸ್‌ಎಗೆ ಆಗಮಿಸಿದ್ದ ಸ್ವಾತಿ ತಮ್ಮ ಸ್ನೇಹಿತೆ ನೀಲಿಮಾ ಜತೆಯಲ್ಲಿ ವಾಸವಾಗಿದ್ದರು. ಆಕೆ ಕೆಲಸಕ್ಕೆ ಹೋದ ಸಮಯದಲ್ಲಿ ಈ ದುಡುಕಿನ ನಡೆಯನ್ನಿಟ್ಟಿದ್ದಾರೆ. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ.
ಜವಾಹರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಕಳೆದ ಎರಡು ತಿಂಗಳಲ್ಲಿ ಎನ್‌ಐಎಸ್‌ಎನಲ್ಲಿ ನಡೆಯುತ್ತಿರುವ ಎರಡನೆಯ ಆತ್ಮಹತ್ಯೆ ಪ್ರಕರಣ ಇದಾಗಿದೆ. ತಂದೆ ಸಾವಿನಿಂದ ಆಘಾತಗೊಂಡಿದ್ದ ಹರಿಯಾಣಾ ಮೂಲದ ಟ್ರೈನಿ ಎಸ್ಐ ಜನವರಿ 19ರಂದು ಸಾವಿಗೆ ಶರಣಾಗಿದ್ದರು.