ಬಿಹಾರದ ನಿತೀಶ್ ಕುಮಾರ್ ಸಂಪುಟದ ಸಚಿವ ಅಬ್ದುಲ್ ಜಲಿಲ್ ಮಸ್ತಾನ್ ಪ್ರಧಾನಿ ಭಾವಚಿತ್ರಕ್ಕೆ ಚಪ್ಪಲಿ ಎಸೆಯಿರಿ ಎಂದು ಕರೆ ನೀಡುವ ಮೂಲಕ ಬಹುದೊಡ್ಡ ವಿವಾದಕ್ಕೆ ಕಾರಣರಾಗಿದ್ದಾರೆ.
ಈ ಮಹಾಪ್ರಮಾದದ ವಿಡಿಯೋ ಸ್ಥಳೀಯ ಟಿವಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದಂತೆ, ಕೆರಳಿರುವ ಬಿಜೆಪಿ ರಾಜ್ಯ ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗುವುದು. ಪ್ರಧಾನಿಗೆ ಇಂತಹ ಅವಮಾನ ಮಾಡಿರುವ ಸಚಿವನನ್ನು ಮಂತ್ರಮಂಡಲದಿಂದ ಕಿತ್ತುಹಾಕುವಂತೆ ಆಗ್ರಹಿಸಲಾಗುವುದು ಎಂದಿದೆ.
ಪೂರ್ನಿಯಾ ಜಿಲ್ಲೆಯ ಅಮೌರ್‌ನಲ್ಲಿ ಫೆಬ್ರವರಿ 22ರಂದು ಸಾರ್ವಜನಿಕ ಸಭೆ ನಡೆಸಿದ್ದ ಜಲಿಲ್ ಕೇಂದ್ರ ಸರ್ಕಾರದ ನೋಟು ಅಮೌಲ್ಯೀಕರಣ ನಡೆಯನ್ನು ವಿರೋಧಿಸಿ ಪ್ರತಿಭಟಿಸಿ ಎಂದು ಜನರಿಗೆ ಕರೆ ನೀಡಿದ್ದರು. 50 ದಿನಗಳಲ್ಲಿ ನೋಟು ನಿಷೇಧದಿಂದಾಗುತ್ತಿರುವ ಬಿಕ್ಕಟ್ಟು ಶಮನವಾಗದಿದ್ದರೆ ನೀವು ಕೊಡುವ ಶಿಕ್ಷೆಯನ್ನೆದುರಿಸಲು ನಾನು ಸಿದ್ಧ ಎಂದು ಪ್ರಧಾನಿ ವಾಗ್ದಾನ ಮಾಡಿದ್ದರು. ಆದರೆ ಅವರಂದಂತೆ ಸಮಸ್ಯೆಗಳಿನ್ನು ಮುಗಿದಿಲ್ಲ. ಮತ್ತೀಗ ಪ್ರಧಾನಿಗೆ ಶಿಕ್ಷೆ ನೀಡಿ. ಅವರ ಭಾವಚಿತ್ರಕ್ಕೆ ಚಪ್ಪಲಿ ಎಸೆಯಿರಿ ಎಂದು ಅವರು ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು.
ಅವರು ವೇದಿಕೆಯಲ್ಲಿ ತಮ್ಮ ಮಾತನ್ನು ಮುಂದುವರೆಸುತ್ತಿದ್ದಂತೆ ಕುರ್ಚಿಯಲ್ಲಿಟ್ಟಿದ್ದ ಮೋದಿ ಭಾವಚಿತ್ರಕ್ಕೆ ಚಪ್ಪಲಿಯನ್ನೆಯಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಸುಶೀಲಕುಮಾರ್, ಪಕ್ಷಗಳ ನಡುವೆ ಸೈದ್ಧಾಂತಿಕ ಭೇದಗಳಿರಬಹುದು, ಆದರೆ ಸಚಿವನಾದವನೊಬ್ಬ ಜನರನ್ನು ಪ್ರಚೋದಿಸಿ ದೇಶದ ಪ್ರಧಾನಿಗೆ ಈ ರೀತಿಯಲ್ಲಿ ಅವಮಾನಿಸಲು ನಮ್ಮ ಸಂವಿಧಾನ ಅವಕಾಶ ನೀಡುವುದಿಲ್ಲ. ಈ ವಿಷಯವನ್ನು ವಿಧಾನಸಭಾ ಕಲಾಪದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಲು ಜಲಿಲ್ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ.