Publish Date: Tue, 15 Oct 2019 (11:01 IST)
Updated Date: Tue, 15 Oct 2019 (11:03 IST)
ನವದೆಹಲಿ: ಇಬ್ಬರು ಖದೀಮರು ತಮ್ಮ ಎಂದಿನ ಚಾಳಿಯಂತೆ ಮಹಿಳೆಯೊಬ್ಬರ ಪರ್ಸ್ ಕಸಿದು ಸಾವಿರಗಟ್ಟಲೆ ದುಡ್ಡು ಸಿಕ್ಕ ಖುಷಿಯಲ್ಲಿದ್ದರು! ಆದರೆ ಪೊಲೀಸರ ತಂಡವೇ ತಮ್ಮನ್ನು ಬೆನ್ನಟ್ಟಿರುತ್ತಿರುವುದು ನೋಡಿದಾಗಲೇ ಅವರಿಗೆ ಗೊತ್ತಾಗಿದ್ದು ತಾವು ದರೋಡೆ ಮಾಡಿದ್ದು ಸಾಮಾನ್ಯ ಮಹಿಳೆಯನ್ನು ಅಲ್ಲವೆಂದು!
ದೆಹಲಿಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಇಬ್ಬರು ಖದೀಮರು ಬೈಕ್ ನಲ್ಲಿ ಬಂದು ಆಗ ತಾನೇ ಆಟೋದಿಂದ ಇಳಿಯುತ್ತಿದ್ದ ಮಹಿಳೆಯ ಕೈಯಲ್ಲಿದ್ದ ಪರ್ಸ್, ಮೊಬೈಲ್ ಫೋನ್ ಕಸಿದು ಪರಾರಿಯಾಗಿದ್ದಾರೆ. ಆ ಪರ್ಸ್ ನೊಳಗೆ ಸುಮಾರು 76 ಸಾವಿರ ರೂ. ಎರಡು ಫೋನ್ ಜತೆಗೆ ಮುಖ್ಯವಾದ ದಾಖಲೆ ಪತ್ರಗಳಿದ್ದವು. ದುಡ್ಡು ಸಿಕ್ಕ ಖುಷಿಯಲ್ಲಿ ಖದೀಮರು ಖುಷಿಯಾಗಿದ್ದರು.
ಆದರೆ ಈ ನಡುವೆ ಪೊಲೀಸರ ತಂಡವೇ ಅವರನ್ನು ಬೆನ್ನಟ್ಟುತ್ತಿರುವುದು ಅವರಿಗೆ ಗೊತ್ತಾಗಿತ್ತು. ಅದರ ನಡುವೆಯೇ ಖದೀಮರಲ್ಲಿ ಒಬ್ಬನ ಪತ್ನಿ ಫೋನ್ ಮಾಡಿ ಈ ಪರ್ಸ್ ಬೇರೆ ಯಾರದೂ ಅಲ್ಲ. ಸ್ವತಃ ಪ್ರಧಾನಿ ಮೋದಿಯ ಸೊಸೆಯದ್ದು ಎಂಬ ವಿಚಾರವನ್ನು ಹೇಳಿದ್ದಳು. ಆಗಲೇ ಗೊತ್ತಾಗಿದ್ದು ಖದೀಮರಿಗೆ, ತಾವು ದರೋಡೆ ಮಾಡಿದ್ದು ಪ್ರಧಾನಿ ಮೋದಿ ಸೊಸೆಯನ್ನು ಅಂತ!
ಕೊನೆಗೂ 700 ಪೊಲೀಸರು, 200 ಸಿಸಿಟಿವಿ ಕ್ಯಾಮರಾ ಫೂಟೇಜ್ ಸಹಾಯದೊಂದಿಗೆ ಈ ಪ್ರಕರಣ ಬೇಧಿಸಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.