ನ್ಯೂಯಾರ್ಕ್: ಅಮೆರಿಕಾ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕ್ಯಾಲಿಫೋರ್ನಿಯಾ ವಿವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂದಿ ಬಿಜೆಪಿ ನನ್ನ ಬಗ್ಗೆ ಇಲ್ಲಸಲ್ಲದ ರೂಮರ್ಸ್ ಹಬ್ಬಿಸುತ್ತಿದೆ ಎಂದು ಆರೋಪಿಸಿದ್ದಾರೆ.
‘ಇಂಡಿಯಾ@70: ರಿಫ್ಲೆಕ್ಷನ್ ಆನ್ ದಿ ಪಾತ್ ಫಾರ್ವರ್ಡ್’ ಹೆಸರಿನ ಸಂವಾದ ಕಾರ್ಯಕ್ರಮದುದ್ದಕ್ಕೂ ಅವರು ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ಆಡಳಿತ ವೈಖರಿಯನ್ನು ಟೀಕಿಸಿದರು. ನೋಟು ನಿಷೇಧವನ್ನು ಟೀಕಿಸಿದ ರಾಹುಲ್, ಕಾಶ್ಮೀರವನ್ನು ಉಗ್ರರ ಸ್ವರ್ಗವಾಗಿ ಮೋದಿ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿಯ ಸಾಮರ್ಥ್ಯವೆಂದರೆ ಅವರಿಗೆ ಒಂದು ಗುಂಪಿನಲ್ಲಿ ವಿವಿಧ ಮನೋಭಾವದ ವ್ಯಕ್ತಿಗಳನ್ನು ಭಾಷಣದ ಮೂಲಕ ಹೇಗೆ ಸೆಳೆದಿಟ್ಟುಕೊಳ್ಳಬೇಕು ಎಂದು ಗೊತ್ತು. ಬಹುಶಃ ಅವರು ನನಗಿಂತ ಉತ್ತಮ ಭಾಷಣಕಾರ. ಈ ಮೂಲಕ ತಾವು ದೊಡ್ಡ ಸಾಧಕ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.