ಪ್ರಧಾನಿ ನರೇಂದ್ರ ಮೋದಿಗೆ ದೇಶದ ಬಗ್ಗೆ ದೂರದೃಷ್ಠಿಯಿಲ್ಲವಾದ್ದರಿಂದ ಮತದಾರರ ಮೇಲೆ ಪ್ರಭಾವ ಬೀರುವಲ್ಲಿ ವಿಫಲವಾಗಿದ್ದಾರೆ. ಮೋದಿಗೆ ಕೇವಲ ಮತ್ತೊಬ್ಬರನ್ನು ಹೀಯಾಳಿಸುವುದು ಮಾತ್ರ ಗೊತ್ತಿದೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಲೇವಡಿ ಮಾಡಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಜನಪರ ಯೋಜನೆಗಳನ್ನು ತಾವೇ ಜಾರಿಗೆ ತಂದಿರುವುದಾಗಿ ಹೇಳಿಕೊಂಡು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮತದಾರರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಅವರಿಗೆ ತಾಕತ್ತಿದ್ರೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲೆಸೆದಿದ್ದಾರೆ.
ದೇಶದ ಮತ್ತು ಭಾರತೀಯ ಜನಸಂಘದ ಇತಿಹಾಸವನ್ನು ನಿರ್ಲಕ್ಷಿಸುತ್ತಿರುವ ಮೋದಿಯ ಬಗ್ಗೆ ಜನತೆಗೆ ಭ್ರಮನಿರಸನವಾಗಿದೆ. ಇದೀಗ ಮತದಾರರಿಗೆ ಮೋದಿಯ ಪೊಳ್ಳುತನದ ಬಗ್ಗೆ ಅರಿವಾಗಿದೆ ಎಂದು ಚುನಾವಣೆ ಪ್ರಚಾರದಲ್ಲಿ ಗುಡುಗಿದ್ದಾರೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ಸೋನಿಯಾ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ದಿಗ್ವಿಜಯ್, ಮುಖ್ಯಮಂತ್ರಿಗಳ ಕುಟುಂಬದ ಭ್ರಷ್ಟಾಚಾರದ ಬಗ್ಗೆ ನ್ಯಾಯಾಲಯದಲ್ಲಿ ಸಾಬೀತುಪಡಿಸುವಷ್ಟು ಸಾಕ್ಷ್ಯಾಧಾರಗಳು ನನ್ನ ಬಳಿಯಿವೆ ಎಂದು ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಬಿಜೆಪಿ 2003ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ಹತ್ತು ವರ್ಷಗಳ ಕಾಲ ದಿಗ್ವಿಜಯ್ ಸಿಂಗ್ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು.