ಆಮ್ ಆದ್ಮಿ ಪಕ್ಷದ ನಾಯಕರ ವಿರುದ್ಧ ಕೇಂದ್ರ ಸರಕಾರ ನಿರಂತರವಾಗಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
10 ನಿಮಿಷಗಳ ವಿಡಿಯೋದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಮೋದಿ ಆಪ್ ವಿರುದ್ಧ ದಮನ್ ಚಕ್ರ ಪ್ರಯೋಗಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ನಮ್ಮ ಪಕ್ಷದ 10 ಶಾಸಕರನ್ನು ಬಂಧಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಆಪ್ ಶಾಸಕನ ನಿವಾಸದ ಮೇಲೆ ದಾಳಿ ಮಾಡಿದೆ. 21 ಶಾಸಕರನ್ನು ಅನರ್ಹಗೊಳಿಸುವ ಪ್ರಯತ್ನ ನಡೆಯುತ್ತಿದೆ. ನಮ್ಮ ಸಂಸದ ಭಗವಂತ್ ಮಾನ್‌ನನ್ನು ಅಮಾನತ್ತು ಮಾಡಲಾಗಿದೆ. ಮನೀಷ್ ಸಿಸೋಡಿಯಾ ವಿರುದ್ಧದ ತನಿಖೆ, ಸಿಬಿಐ ದಾಳಿಗಳನ್ನು ನೋಡಿದಲ್ಲಿ ಇದೊಂದು ದಮನ್ ಚಕ್ರ ಅನ್ನಿಸದೆ ಇರದು ಎಂದು ವಾಗ್ದಾಳಿ ನಡೆಸಿದ್ದಾರೆ.
ಮೋದಿ ಏನು ಮಾಡದಿದ್ದರೂ ಪ್ರತಿದಿನ ನಾನು ಮೋದಿ ವಿರುದ್ಧ ಆರೋಪ ಮಾಡುತ್ತಿದ್ದೇನೆ ಎಂದು ಜನತೆ ಹೇಳುತ್ತಾರೆ. ಆದರೆ, ಆದಾಯ ತೆರಿಗೆ ಇಲಾಖೆ ದಾಳಿ, ದೆಹಲಿ ಪೊಲೀಸ್ ಮತ್ತು ಸಿಬಿಐ ದಾಳಿಗಳ ಹಿಂದೆ ಒಬ್ಬ ಮಾಸ್ಟರ್‌ಮೈಂಡ್ ಖಂಡಿತವಾಗಿಯೂ ಇರುತ್ತಾರೆ. ಮೋದಿ, ಪಿಎಂಓ ಕಚೇರಿ ಮತ್ತು ಅಮಿತ್ ಶಾ ನಮ್ಮ ವಿರುದ್ಧ ಒಂದಾಗಿ ಸಂಚು ರೂಪಿಸುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.