ನವದೆಹಲಿ: ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿರುವ ಕೇಂದ್ರ ಬಜೆಟ್ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯ ಕಾಪಿ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಟೀಕಿಸಿದ್ದಾರೆ. ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾ ಎಕ್ಸ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ಪ್ರಣಾಳಿಕೆಯನ್ನು ಓದಿ ರಾಹುಲ್ ಗಾಂಧಿಯವರ ಐಡಿಯಾಗಳನ್ನು ಕಾಪಿ ಮಾಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಅಂದು ಕಾಂಗ್ರೆಸ್ ಪ್ರಣಾಳಿಕೆಯ 30 ನೇ ಪುಟದಲ್ಲಿ ಹೇಳಿದ ಅಂಶವನ್ನು ಅಳವಡಿಸಿಕೊಂಡಿದ್ದಾರೆ ಎಂದು ಚಿದಂಬರಂ ಹೇಳಿದ್ದಾರೆ.
ವಿತ್ತಸಚಿವರು ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪ್ರಣಾಳಿಕೆಯನ್ನು ಓದಿದ್ದಾರೆ ಎಂದು ತಿಳಿದು ಸಂತೋಷವಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿದ್ದ ಉದ್ಯೋಗ ಸಂಬಂಧಿತ ಪ್ರೋತ್ಸಾಹ ಧನ (ಇಸಿಐ)ಯನ್ನು ಅಳವಡಿಸಿಕೊಂಡಿದ್ದಾರೆ ಎಂಬುದು ಸಂತೋಷ. ಇದನ್ನು ಕಾಂಗ್ರೆಸ್ ಪ್ರಣಾಳಿಕೆಯ 30 ನೇ ಪುಟದಲ್ಲಿ ವಿವರಿಸಲಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 11 ನೇ ಪುಟದಲ್ಲಿ ಹೇಳಲಾಗಿದ್ದ ಅಪ್ರೆಂಟಿಸ್ ಗೆ ಭತ್ಯೆಯೊಂದಿಗೆ ಅಪ್ರೆಂಟಿಸ್ ಶಿಪ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅವರು ಬಿಟ್ಟು ಹೋಗಿರುವ ವಿಚಾರಗಳನ್ನು ಶೀಘ್ರದಲ್ಲೇ ಪಟ್ಟಿ ಮಾಡಿ ಹೇಳುತ್ತೇನೆ ಎಂದು ಚಿದಂಬರಂ ಹೇಳಿದ್ದಾರೆ.
ಅದಲ್ಲದೆ ಕಾಂಗ್ರೆಸ್ ಪ್ರಣಾಳಿಕೆಯ 31 ನೇ ಪುಟದಲ್ಲಿ ಹೇಳಲಾಗಿದ್ದ ಆಂಗಲ್ ಟ್ಯಾಕ್ಸ್ ತೆಗೆದು ಹಾಕುವುದಾಗಿ ಹೇಳಿರುವುದು ಸಂತೋಷದಾಯಕ ವಿಚಾರ ಎಂದು ಹೇಳಿದ್ದಾರೆ.