ಬೆಂಗಳೂರು: ಗುಜರಾತ್ ನಲ್ಲಿ ಕಾಂಗ್ರೆಸ್ ನಾಯಕ ವಘೇಲಾ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಪಾಳಯ ಸೇರಿಕೊಂಡ ಮೇಲೆ ಮತ್ತಷ್ಟು ಶಾಸಕರು ಬಿಜೆಪಿ ಸೇರಬಹುದೆಂಬ ಭೀತಿಯಲ್ಲಿ ಕಾಂಗ್ರೆಸ್ ಶಾಸಕರು ಕರ್ನಾಟಕಕ್ಕೆ ವಲಸೆ ಬಂದಿದ್ದಾರೆ.
ಇದರೊಂದಿಗೆ ಮತ್ತೊಂದು ರೆಸಾರ್ಟ್ ರಾಜಕಾರಣ ಶುರುವಾಗಿದೆ. ಈ ವರ್ಷಾಂತ್ಯದಲ್ಲಿ ಪ್ರಧಾನಿ ಮೋದಿ ತವರು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತಷ್ಟು ಕೈ ಶಾಸಕರನ್ನು ಬಿಜೆಪಿ ಸೆಳೆದುಕೊಳ್ಳಬಹುದು ಎಂಬ ಭಯದಲ್ಲಿರುವ ಕೈ ಪಾಳಯ ಕರ್ನಾಟಕದ ರೆಸಾರ್ಟ್ ಒಂದರಲ್ಲಿ ಪಕ್ಷದ ಶಾಸಕರನ್ನು ಇರಿಸಿದೆ.
ಇಂದು ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಾಸಕರನ್ನು ಡಿ.ಕೆ. ಶಿವಕುಮಾರ್ ಸಹೋದರ ಸಂಸದ ಡಿಕೆ ಸುರೇಶ್ ಬರಮಾಡಿಕೊಂಡು ರೆಸಾರ್ಟ್ ಗೆ ಕರೆದೊಯ್ದಿದ್ದಾರೆ. ಆಪರೇಷನ್ ಕಮಲಕ್ಕೆ ಬಲಿಯಾಗುವ ಆತಂಕದಲ್ಲಿರುವ ಕೈ ಶಾಸಕರು ಕೆಲವು ದಿನಗಳ ಮಟ್ಟಿಗೆ ಇಲ್ಲಿಯೇ ಉಳಿದುಕೊಳ್ಳಲಿದ್ದಾರೆ.
ಬಿಹಾರ ರಾಜ್ಯವನ್ನೂ ತಮ್ಮ ತೆಕ್ಕೆಗೆ ಎಳೆದುಕೊಳ್ಳಲು ಯಶಸ್ವಿಯಾಗಿರುವ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಂತ್ರ ಗುಜರಾತ್ ನಲ್ಲೂ ಫಲ ಕೊಡಬಹುದೆಂಬ ಭೀತಿಯಲ್ಲಿ ಕೈ ಶಾಸಕರಿದ್ದಾರೆ.