ಜಮ್ಮು ಕಾಶ್ಮೀರ: ಬರೋಬ್ಬರಿ 10 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾಯಿತ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಒಮರ್ ಅಬ್ದುಲ್ಲಾ ಅವರ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿ 42 ಸ್ಥಾನಗಳನ್ನು ಗೆದ್ದುಕೊಂಡು ಅಧಿಕಾರಕ್ಕೇರುತ್ತಿದೆ. ಒಮರ್ ಗೆ ಪಕ್ಷೇತರರೂ ಬೆಂಬಲ ನೀಡುತ್ತಿದ್ದಾರೆ. ಇಂಡಿಯಾ ಒಕ್ಕೂಟದ ಭಾಗವಾಗಿರುವ ನ್ಯಾಷನಲ್ ಕಾನ್ಫರೆನ್ಸ್ ಗೆ ಕಾಂಗ್ರೆಸ್ ಬೆಂಬಲ ನೀಡಲಿದೆಯೇ ಎನ್ನುವುದು ಕುತೂಹಲಕ್ಕೆ ಕಾರಣವಾಗಿತ್ತು.
ಇದೀಗ ಕಾಂಗ್ರೆಸ್ ನೇರವಾಗಿ ಸರ್ಕಾರದಲ್ಲಿ ಭಾಗಿಯಾಗದೇ ಬಾಹ್ಯ ಬೆಂಬಲ ನೀಡಲು ತೀರ್ಮಾನಿಸಿದೆ. ಒಮರ್ ಅಬ್ದುಲ್ಲಾ ಮುಖ್ಯಮಂತ್ರಿಯಾದ ಬೆನ್ನಲ್ಲೇ ಮೋದಿ ಮತ್ತು ಕೇಂದ್ರ ಸರ್ಕಾರದ ಆರ್ಟಿಕಲ್ 370 ರದ್ದು ತೀರ್ಮಾನವನ್ನು ಹೊಗಳಿದ್ದರು. ಹೀಗಾಗಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಬೆಂಬಲ ಪಡೆಯಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದರು.
ಆದರೆ ಈಗ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿದೆ. ಅಷ್ಟೇ ಅಲ್ಲದೆ, ಇಂದಿನ ಒಮರ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಇಂಡಿಯಾ ಒಕ್ಕೂಟದ ನಾಯಕರಾದ ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಮುಂತಾದವರು ಹಾಜರಾಗಲಿದ್ದಾರೆ. ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಪ್ರಮಾಣ ವಚನ ಬೋಧಿಸಲಿದ್ದಾರೆ.