ದೇಶಾದ್ಯಂತ ನೋಟು ನಿಷೇಧ ಜಾರಿಗೊಳಿಸಿರುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ಸೇರಿದಂತೆ ವಿಪಕ್ಷಗಳು ಹತಾಶೆಯಿಂದಾಗಿ ಸಂಸತ್ತಿನ ಕಲಾಪ ಅಸ್ತವ್ಯಸ್ಥಗೊಳಿಸಿ ಬಹಿರಂಗವಾಗಿ ಅಪ್ರಾಮಾಣಿಕರನ್ನು ಬೆಂಬಲಿಸುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ನೋಟು ನಿಷೇಧ ಜಾರಿ ಮಾನವ ನಿರ್ಮಿತ ದುರಂತ ಎಂದು ಬಣ್ಣಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರದಾನಿ ಮೋದಿ, ಅವರ ಅಧಿಕಾರವಧಿಯಲ್ಲಿ 2ಜಿ, ಸಿಡ್ಬ್ಯೂಜಿ ಮತ್ತು ಕಲ್ಲಿದ್ದಲು ಹಂಚಿಕೆ ಅವ್ಯವಹಾರಗಳು ನಡೆದಿರುವುದನ್ನು ಮರೆತಿದ್ದಾರೆ ಎಂದು ಟೀಕಿಸಿದರು.
ಪ್ರಾಮಾಣಿಕರಿಗೆ ಯಾವುದೇ ರೀತಿಯ ತೊಂದರೆಯಿಲ್ಲ. ಕಾಳಧನವನ್ನು ಹೊಂದಿರುವ ಅಪ್ರಾಮಾಣಿಕರಿಗೆ ತೊಂದರೆ ತಪ್ಪಿದ್ದಲ್ಲ ಎಂದು ಸ್ಪಷ್ಟಪಡಿಸಿದರು.
ನೋಟು ನಿಷೇಧ ಜಾರಿಗೊಳಿಸುವ ನಿರ್ಧಾರದಲ್ಲಿ ರಾಜಕೀಯವಿಲ್ಲ. ನಮ್ಮ ಸಮಾಜ ಮತ್ತು ಆರ್ಥಿಕತೆಯನ್ನು ಶುದ್ಧಗೊಳಿಸಲು ಇಂತಹ ಕಠಿಣ ನಿರ್ಧಾರ ಅಗತ್ಯವಾಗಿತ್ತು. ಒಂದು ವೇಳೆ ಚುನಾವಣೆ ರಾಜಕೀಯ ಮಾಡಬೇಕಾಗಿದ್ದಲ್ಲಿ ಇದನ್ನು ಜಾರಿಗೊಳಿಸುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.
ನೋಟು ನಿಷೇಧ ಕುರಿತಂತೆ ಚಳಿಗಾಲದ ಅಧಿವೇಶನ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ಸರಕಾರ ಸಂಸತ್ತಿನ ಕಲಾಪ ನಡೆಸಲು ಬಯಸಿತ್ತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.