ಸಂಪೂರ್ಣ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಡಿಸೆಂಬರ್ 16, 2012ರಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಹತ್ಯೆ ಪ್ರಕರಣದ ಅಪರಾಧಿಗಳಲೊಬ್ಬನಾದ ವಿನಯ್ ಶರ್ಮಾ ಗುರುವಾರ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ನಿನ್ನೆ ರಾತ್ರಿ ಕೆಲ ನಿಷೇಧಿತ ನೋವು ನಿವಾರಕಗಳನ್ನು ಸೇವಿಸಿದ್ದ ವಿನಯ್ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಭೀರ ಸ್ಥಿತಿಯಲ್ಲಿರುವ ಆತನನ್ನು ದೀನ್ ದಯಾಳ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
2013ರಲ್ಲಿ ಜೈಲಿನ ಕೈದಿಗಳು ಆತನ ಮೇಲೆ ದಾಳಿ ನಡೆಸಿದ್ದರು. ಆಗ ಆತ ತನಗೆ ಹೆಚ್ಚಿನ ಭದ್ರತೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದ.
6 ಆರೋಪಿಗಳಲ್ಲಿ ಒಬ್ಬ ಸಾವನ್ನಪ್ಪಿದ್ದರೆ, ಬಾಲಾಪರಾಧಿ 3 ತಿಂಗಳ ಶಿಕ್ಷೆಯನ್ನು ಅನುಭವಿಸಿ ಕಳೆದ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿದ್ದಾನೆ. ಪ್ರಮುಖ ಆರೋಪಿ ಬಸ್ ಚಾಲಕ ರಾಮ್ ಸಿಂಗ್ 2013ರಲ್ಲಿ ಇದೇ ಜೈಲಿನಲ್ಲಿಯೇ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ.
ಶರ್ಮಾ ಜತೆ ಅಕ್ಷಯ್ ಠಾಕೂರ್, ಮುಖೇಶ್, ಪವನ್ ಗುಪ್ತಾ ಮತ್ತು ಇತರ ಮೂವರು ಮರಣದಂಡನೆಗೊಳಗಾಗಿದ್ದು ತಿಹಾರ್ ಜೈಲಿನಲ್ಲಿದ್ದಾರೆ.
23 ವರ್ಷದ ಪ್ಯಾರಾ-ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಚಲಿಸುತ್ತಿದ್ದ ಬಸ್‌ನಲ್ಲಿ ಆಕೆಯ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ನಡೆಸಿ ಬಳಿಕ ಅಮಾನುಷವಾಗಿ ಹಲ್ಲೆ ಮಾಡಲಾಗಿತ್ತು. 2012ರ ಡಿಸೆಂಬರ್ ತಿಂಗಳಲ್ಲಿ ಈ ಘಟನೆ ನಡೆದಿತ್ತು. ಸಾವು ಬದುಕಿನ ನಡುವೆ ಹೋರಾಡಿದ್ದ ಯುವತಿ ಸಿಂಗಾಪುರ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.
ಈ ಹೇಯ ಕೃತ್ಯಕ್ಕೆ ವಿಶ್ವದಾದ್ಯಂತ ಖಂಡನೆ ವ್ಯಕ್ತವಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.