2,000 ರೂಪಾಯಿ ನೋಟುಗಳಿಗೆ ಚಿಲ್ಲರೆ ಪಡೆಯುವುದು ಕಷ್ಟಸಾಧ್ಯವಾಗಿದ್ದು, ಈ ಸಮಸ್ಯೆಯನ್ನು ನಿವಾರಿಸಲು ಹೊರಟಿರುವ ಭಾರತೀಯ ರಿಸರ್ವ್ ಬ್ಯಾಂಕ್ ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರ ಹೊರಟಿದೆ.
ಶೀಘ್ರವೇ ಹೊಸ ವಿನ್ಯಾಸದ 1,000 ರೂಪಾಯಿ ನೋಟುಗಳು ಚಲಾವಣೆಗೆ ಬರಲಿವೆ ಎಂದು ಹೇಳಲಾಗುತ್ತಿದೆ.
ಹಳೆಯ ಸಾವಿರ ರೂಪಾಯಿ ನೋಟುಗಳಿಗೆ ಹೋಲಿಸಿದರೆ ಹೊಸ ನೋಟು ಗಾತ್ರದಲ್ಲಿ ಚಿಕ್ಕದಲ್ಲಿರಲಿದೆ. ಬಣ್ಣವೂ ವಿಭಿನ್ನವಾಗಿದ್ದು ಹೆಚ್ಚಿನ ಸುರಕ್ಷತಾ ಅಂಶಗಳನ್ನು ಹೊಂದಿರಲಿದೆ. ಜತೆಗೆ ಅಂಧರಿಗೆ ಗುರುತಿಸಲು ಸಹಾಯವಾಗುವಂತೆ ಬ್ರೈಲ್‌ಸ್ನೇಹಿಯಾಗಿರಲಿವೆ.
ಕಪ್ಪು ಹಣ, ನಕಲಿ ನೋಟು ಹಾವಳಿ, ಭ್ರಷ್ಟಾಚಾರಕ್ಕೆ ಕಡಿವಾಣ ಮತ್ತು ಉಗ್ರವಾದಕ್ಕೆ ಪೆಟ್ಟುಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ 2016, ನವೆಂಬರ್ 16 ರಂದು 500 ಮತ್ತು 1,000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿತ್ತು. ಬಳಿಕ 2,000 ರೂಪಾಯಿ ಮತ್ತು 500 ಮುಖಬೆಲೆಯ ಹೊಸ ನೋಟುಗಳನ್ನು ಜಾರಿಗೆ ತಂದಿದೆ.
2,000 ರೂಪಾಯಿ ನೋಟುಗಳನ್ನು ಹಿಂದಕ್ಕೆ ಪಡೆಯುವ ಸಾಧ್ಯತೆಗಳು ಸಹ ಇವೆ ಎಂದು ಹೇಳಲಾಗುತ್ತಿದೆ.
ನಗದು ಕೊರತೆ ಬಿಕ್ಕಟ್ಟು ನೀಗುತ್ತಿದ್ದು ಮಾರ್ಚ್ ತಿಂಗಳಿಂದ ಬ್ಯಾಂಕ್ ಮತ್ತು ಎಟಿಎಂಗಳಿಂದ ಹಣ ಪಡೆಯುವುದಕ್ಕೆ ಇರುವ ನಿರ್ಬಂಧವನ್ನು ಆರ್‌ಬಿಐ ಕೈ ಬಿಡಲಿದೆ ಎಂದು ಸಹ ಹೇಳಲಾಗುತ್ತಿದೆ.