ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಉಧಮ್ಪುರ ಜಿಲ್ಲೆಯಲ್ಲಿ 2014 ರಲ್ಲಿ ತನ್ನ ತಾಯಿಯ ಶಿರಚ್ಛೇದ ಮಾಡಿದ್ದ 45 ವರ್ಷದ ಅಪರಾಧಿಗೆ ಸ್ಥಳೀಯ ನ್ಯಾಯಾಲಯ ಮರಣದಂಡನೆ ವಿಧಿಸಿ ಶನಿವಾರ ತೀರ್ಪು ಪ್ರಕಟಿಸಿದೆ.
ಅಪರಾಧಿಯು ವೃದ್ಧ ತಾಯಿಯ ಕುತ್ತಿಗೆಯ ಮೇಲೆ ಕುಡಗೋಲಿನಿಂದ ಹಲ್ಲೆ ನಡೆಸಿದ್ದ. ನಂತರ ಅತ್ಯಂತ ಅಮಾನವೀಯ ಮತ್ತು ಬರ್ಬರವಾಗಿ ಆಕೆಯ ತಲೆಯನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಿದ್ದ. ಈ ಕೃತ್ಯವನ್ನು ಅಪರಾಧಿ ಸಂಚು ರೂಪಿಸಿ ಎಸಗಿದ್ದ ಎಂದು ಉಧಮ್ಪುರದ ಪ್ರಧಾನ ಸೆಷನ್ಸ್ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ರಾಮನಗರದ ನಿವಾಸಿ ಜೀತ್ ಸಿಂಗ್ ಅಪರಾಧಿಯಾಗಿದ್ದು, ತಾಯಿಯೊಂದಿಗೆ ಜಮೀನು ನೀಡುವಂತೆ ಆಗಾಗ ಗಲಾಟೆ ಮಾಡುತ್ತಿದ್ದ. ಇನ್ನೊಬ್ಬ ಮಗ ಮುಲಾಖ್ ರಾಜ್ನೊಂದಿಗೆ ವಾಸಿಸುವಂತೆ ಒತ್ತಾಯಿಸುತ್ತಿದ್ದ. ಆ ವೇಳೆ ಪತ್ನಿ ತಪ್ಪಿಸಿಕೊಳ್ಳದೆ ಅಲ್ಲೇ ಉಳಿದುಕೊಂಡಿದ್ದರೆ ಅವನು ಖಂಡಿತವಾಗಿಯೂ ತನ್ನ ಹೆಂಡತಿಯನ್ನೂ ಕೊಲ್ಲುತ್ತಿದ್ದ ಎಂದು ನ್ಯಾಯಾಧೀಶ ಹಕ್ ನವಾಜ್ ಜರ್ಗರ್ ತೀರ್ಪಿನಲ್ಲಿ ತಿಳಿಸಿದ್ದಾರೆ.