ಭಾರತದತ್ತ ನೋಡಿದಲ್ಲಿ ವೈರಿಗಳ ಕಣ್ಣು ಕಿತ್ತುಹಾಕುತ್ತೇವೆ ಎನ್ನುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಿವಸೇನೆ, ಚುನಾವಣೆಗೆ ಮುನ್ನ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುತ್ತೇನೆ ಎಂದು ಹೇಳಿರುವುದು ಕೇವಲ ಮತಗಳನ್ನು ಪಡೆಯಲು ಮಾತ್ರ ಎನ್ನುವುದು ಇದೀಗ ಸಾಬೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಗೋವಾದಲ್ಲಿ ಪರಿಕ್ಕರ್ ಹೇಳಿಕೆ ನೀಡುತ್ತಿದ್ದಂತೆಯೇ ಗಡಿಭಾಗಗಳಲ್ಲಿ ಪಾಕಿಸ್ತಾನದ ಚಟುವಟಿಕೆಗಳಲ್ಲಿ ಹೆಚ್ಚಳವಾಗುತ್ತಿದ್ದು, ನಮ್ಮ ಯೋಧರು ಹುತಾತ್ಮರಾಗುತ್ತಿದ್ದಾರೆ. ಪರಿಕ್ಕರ್ ಕಡಿಮೆ ಮಾತನಾಡಿ ಹೆಚ್ಚು ಕೆಲಸ ಮಾಡುವುದು ಸೂಕ್ತ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಕಿಡಿಕಾರಿದೆ.
ಬಿಜೆಪಿ ಗೋವಾದಲ್ಲಿ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ ಪರಿಕ್ಕರ್, ನಮಗೆ ಯುದ್ಧ ಬೇಕಾಗಿಲ್ಲ. ಆದರೆ, ಶತ್ರುಗಳು ಕೆಟ್ಟ ದೃಷ್ಠಿ ನಮ್ಮತ್ತ ಬೀರಿದರೆ, ಕಣ್ಣು ಕಿತ್ತು ಹಾಕುವ ಸಾಮರ್ಥ ನಮ್ಮಲ್ಲಿದೆ ಎಂದು ಪಾಕ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಕಳೆದ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ಮೋದಿ, ಒಂದು ವೇಳೆ ನಾವು ಅಧಿಕಾರಕ್ಕೆ ಬಂದರೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುತ್ತೇನೆ. ಅಗತ್ಯವಾದಲ್ಲಿ ಪಾಕಿಸ್ತಾನವನ್ನೇ ನಿರ್ನಾಮ ಮಾಡುತ್ತೇನೆ ಎಂದು ಘೋಷಿಸಿದ್ದರಿಂದ ಭಾರಿ ಸಂಖ್ಯೆಯ ಮತದಾರರು ಬಿಜೆಪಿಗೆ ಮತ ಹಾಕಿದ್ದರು. ಆದರೆ, ಮೋದಿಯಿಂದ ಯಾವುದು ಸಾಧ್ಯವಾಗಿಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದೆ.
ಮನೋಹರ್ ಪರಿಕ್ಕರ್ ರಕ್ಷಣಾ ಸಚಿವರಾದ ನಂತರ ಪಠಾನ್‌ಕೋಟ್, ಉರಿ ದಾಳಿ, ನಾಗ್ರೋಟಾ ಉಗ್ರರ ದಾಳಿ ಸೇರಿದಂತೆ ಹಲವಾರು ದಾಳಿಗಳು ನಡೆದಿದ್ದು, ಅನೇಕ ಯೋಧರು ಹುತಾತ್ಮರಾಗಿದ್ದಾರೆ. ಆದಾಗ್ಯೂ ಪ್ರಧಾನಿ ಮೋದಿ ಮೌನವಾಗಿದ್ದಾರೆ ಎಂದು ವ್ಯಂಗ್ಯವಾಡಿದೆ.
ಪಾಕಿಸ್ತಾನ ಅಥವಾ ಚೀನಾ ಬಿಡಿ. ಗೋವಾದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆಯೇ ಕೇಂದ್ರ ರಕ್ಷಣಾ ಸಚಿವರಿಗೆ ಮಾಹಿತಿಯಿಲ್ಲ ಎಂದು ಶಿವಸೇನೆ ಲೇವಡಿ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.