ನವದೆಹಲಿ, ಸೆ.26 : ಮೂರು ದಿನಗಳ ಅಮೆರಿಕಾ ಪ್ರವಾಸ ಮುಗಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಭಾರತಕ್ಕೆ ವಾಪಾಸ್ಸಾದರು. ಮಧ್ಯಾಹ್ನ 12..15ಕ್ಕೆ ದೆಹಲಿಯ ವಿಮಾನನಿಲ್ದಾಣದಲ್ಲಿ ವಿಶೇಷ ವಿಮಾನದಲ್ಲಿ ಬಂದಿಳಿಯುವ ಮೂಲಕ ಪ್ರವಾಸವನ್ನು ಅಂತ್ಯಗೊಳಿಸಿದರು.
Photo Courtesy: Google
ಕೋವಿಡ್ ಆರಂಭವಾದ ಬಳಿಕ ಮೋದಿ ಅವರು ತಮ್ಮ ವಿದೇಶ ಪ್ರವಾಸಕ್ಕೆ ಕಡಿವಾಣ ಹಾಕಿದ್ದರು. ಕಳೆದ ಎರಡು ವರ್ಷದಲ್ಲಿ ಒಮ್ಮೆ ಮಾತ್ರ ಬಾಂಗ್ಲದೇಶಕ್ಕೆ ಪ್ರವಾಸ ಮಾಡಿದ್ದನ್ನು ಹೊರತು ಪಡಿಸಿ ಉಳಿದ ಯಾವ ದೇಶಗಳಿಗೂ ಭೇಟಿ ನೀಡಿರಲಿಲ್ಲ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಕಳೆದ ಮೂರು ದಿನಗಳ ಹಿಂದೆ ಮೋದಿ ಅವರು ಅಮೆರಿಕಾ ಪ್ರವಾಸ ಕೈಗೊಂಡಿದ್ದರು. ಅಲ್ಲಿ ಚತುಷ್ಠ ರಾಷ್ಟ್ರಗಳ ಮುಖ್ಯಸ್ಥರ ನಡುವೆ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ನಂತರ ನಿನ್ನೆ ಸಂಜೆ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು.
ಮೂರು ದಿನಗಳ ಪ್ರವಾಸದ ವೇಳೆ ಅಮೆರಿಕಾ ಹಾಗೂ ಇತರ ರಾಷ್ಟ್ರಗಳ ಜೊತೆಗೆ ಮಿಲಿಟರಿ ಸೇರಿ ಅನೇಕ ಒಪ್ಪಂದಗಳಿಗೆ ಪ್ರಧಾನಿ ಸಹಿ ಹಾಕಿದ್ದಾರೆ.ವಿದೇಶಿ ಪ್ರವಾಸ ಮುಗಿಸಿ ಮರಳಿದ ಪ್ರಧಾನಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬಿಜೆಪಿ ನಾಯಕರು ಅದ್ಧೂರಿ ಸ್ವಾಗತ ಕೋರಿದರು. ಪಲಮಾ ತಾಂತ್ರಿಕ ವಿಮಾನ ನಿಲ್ದಾಣದ ದ್ವಾರದ ಮುಂಭಾಗದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರತ್ತ ಮೋದಿ ಕೈ ಬೀಸಿದರು.
ತಾಯ್ನಾಡಿಗೆ ಮರಳಿದ್ದಾಕ್ಕಾಗಿ ಅದ್ಧೂರಿ ಸ್ವಾಗತ ಕೋರಿದ ಮುಖಂಡರಿಗೆ ಧನ್ಯವಾದ ಹೇಳಿದ ಪ್ರಧಾನಿ ಅವರು ತುರ್ತಾಗಿ ವಿಮಾನ ನಿಲ್ದಾಣದಿಂದ ನಿರ್ಗಮಿಸಿದರು.