ನವದೆಹಲಿ: ದೇಶದ ಅತ್ಯಂತ ಜನಪ್ರಿಯ ಪ್ರಧಾನಿ ಯಾರು ಎಂದು ಇಂಡಿಯಾ ಟುಡೆ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಬಹಿರಂಗಪಡಿಸಿದೆ. ಈ ಸಮೀಕ್ಷೆಯಲ್ಲಿ ಇಂದಿರಾ ಗಾಂಧಿ, ವಾಜಪೇಯಿ ಅವರಂತಹ ಘಟಾನುಘಟಿಗಳನ್ನೂ ಹಾಲಿ ಪ್ರಧಾನಿ ಮೋದಿ ಹಿಂದಿಕ್ಕಿದ್ದಾರೆ.
ಸ್ವಾತಂತ್ರ್ಯ ಭಾರತದ ಜನಪ್ರಿಯ ಪ್ರಧಾನಿ ಎಂದರೆ ನರೇಂದ್ರ ಮೋದಿ ಎಂದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಶೇಕಡಾ 43.7 ರೇಟಿಂಗ್ ಪಾಯಿಂಟ್ ಪಡೆದು ಮೋದಿ ನಂ.1 ಪ್ರಧಾನಿ ಎನಿಸಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಬಿಜೆಪಿಯ ಧುರೀಣ ದಿವಂಗತ ನಾಯಕ ಅಟಲ್ ಬಿಹಾರಿ ವಾಜಪೇಯಿ ಇದ್ದಾರೆ.
ವಾಜಪೇಯಿ ಅವರಿಗೆ ಶೇ.12.1 ರೇಟಿಂಗ್ ಪಾಯಿಂಟ್ ಸಿಕ್ಕಿದೆ. ಮೂರನೇ ಸ್ಥಾನದಲ್ಲಿ 11.6 ಶೇಕಡಾ ರೇಟಿಂಗ್ ಪಾಯಿಂಟ್ ಪಡೆದ ಮನಮೋಹನ್ ಸಿಂಗ್ ಇದ್ದಾರೆ. ತಮ್ಮ 10 ವರ್ಷಗಳ ಆಡಳಿತಾವಧಿಯಲ್ಲಿ ಮನಮೋಹನ್ ಸಿಂಗ್ ಮೌನಿಯಾಗಿದ್ದೇ ಹೆಚ್ಚು ಎಂದು ಟೀಕೆಗೊಳಗಾಗಿದ್ದರೂ ಸಮೀಕ್ಷೆಯಲ್ಲಿ ಇಂದಿರಾ ಗಾಂಧಿಯವರನ್ನೂ ಹಿಂದಿಕ್ಕಿದ್ದಾರೆ. ಇಂದಿರಾ ಗಾಂಧಿ ಶೇಕಡಾ 10.4 ರೇಟಿಂಗ್ ಪಾಯಿಂಟ್ ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಆದರೆ ಕಳೆದ ಬಾರಿ ಫೆಬ್ರವರಿಯಲ್ಲಿ ನಡೆಸಿದ ಸಮೀಕ್ಷೆಗೆ ಹೋಲಿಸಿದರೆ ಮೋದಿ ಜನಪ್ರಿಯತೆಯಲ್ಲಿ ಕೊಂಚ ಕುಸಿತವಾಗಿದೆ. ಆದರೆ ರಾಹುಲ್ ಗಾಂಧಿ ಜನಪ್ರಿಯತೆ ಕೊಂಚ ಹೆಚ್ಚಾಗಿದೆ. ಹಾಗಿದ್ದರೂ ದೇಶದಲ್ಲಿ ಈಗ ಚುನಾವಣೆ ನಡೆದರೂ ಎನ್ ಡಿಎ ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎನ್ನಲಾಗಿದೆ.