2016 ವರ್ಷಕ್ಕೆ ಗುಡ್‌ಬೈ ಹೇಳುತ್ತಿರುವ ಸಂದರ್ಭದಲ್ಲಿಯೇ ಪಶ್ಚಿಮ ಬಂಗಾಳಧ ವರ್ಷದ ವ್ಯಕ್ತಿಯಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಯ್ಕೆಯಾಗಿದ್ದಾರೆ.
ಹಲವಾರು ಅಡೆತಡೆಗಳ ಮಧ್ಯೆಯೂ ಮಮತಾ ಬ್ಯಾನರ್ಜಿ ಸತತ ಎರಡನೇ ಬಾರಿಗೆ ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಿಂಗೂರ್ ಭೂಮಿಯನ್ನು ಮರಳಿ ರೈತರಿಗೆ ನೀಡಿದ ನಂತರ ಅವರ ವರ್ಚಸ್ಸಿನಲ್ಲಿ ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೋಟು ನಿಷೇಧ ಜಾರಿಗೊಳಿಸಿರುವುದನ್ನು ವಿರೋಧಿಸಿ ಮಮತಾ, ದೇಶದ ಬಹುತೇಕ ರಾಜ್ಯಗಳಲ್ಲಿ ರ್ಯಾಲಿಗಳನ್ನು ನಡೆಸಿ ತೀವ್ರ ಪ್ರತಿಭಟನೆ ತೋರಿ ವಿಪಕ್ಷಗಳೊಂದಿಗೆ ಹೋರಾಟ ಮುಂದುವರಿಸಿದ್ದಾರೆ.
ಪ್ರಧಾನಿ ಮೋದಿ ಮತ್ತು ನೋಟು ನಿಷೇಧದ ಬದ್ಧ ಎದುರಾಳಿಯಾಗಿ ಹೊರಹೊಮ್ಮಿರುವ ಮಮತಾ, ಆಪ್ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಬಿಜೆಪಿಯ ಮಿತ್ರಪಕ್ಷ ಶಿವಸೇನೆಯೊಂದಿಗೆ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಕಳೆದ ಹಲವು ದಶಕಗಳಿಂದ ಸಾಂಪ್ರದಾಯಿಕ ಎದುರಾಳಿಗಳಾದ ಎಡಪಕ್ಷಗಳೊಂದಿಗೆ ಮಮತಾ ದೂರವಿದ್ದರೂ ನೋಟು ನಿಷೇಧ ವಿರೋಧಿಸಲು ಬೆಂಬಲ ನೀಡುವಂತೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಅವರಿಗೆ ಕರೆ ಮಾಡಿರುವುದು ಹೊಸ ಬೆಳವಣಿಗೆಯಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.