ಮುಂಬೈ: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ಎರಡು ವಾರಗಳಾದರೂ ಇನ್ನೂ ಸರ್ಕಾರ ರಚನೆಯಾಗಿಲ್ಲ. ಯಾವುದೇ ಪಕ್ಷಕ್ಕೂ ಬಹುಮತ ಬಾರದೇ ಇರುವುದರಿಂದ ಇದೀಗ ಸರ್ಕಾರ ರಚನೆ ಸರ್ಕಸ್ ಜೋರಾಗಿದೆ.
ಬಿಜೆಪಿ ಮತ್ತು ಶಿವಸೇನೆ ನಡುವಿನ ಜಟಾಪಟಿ ತಾರಕಕ್ಕೇರಿದೆ. 50-50 ಫಾರ್ಮುಲಾಗೆ ಒಪ್ಪದ ಬಿಜೆಪಿ ಜತೆ ಮೈತ್ರಿ ಮುರಿದುಕೊಳ್ಳಲು ಶಿವಸೇನೆ ಸಿದ್ಧವಾಗಿದೆ. ಒಂದು ವೇಳೆ ಎನ್ ಡಿಎ ಕೂಟದಿಂದ ಹೊರಬಂದರೆ ಶಿವಸೇನೆ ಜತೆ ಮೈತ್ರಿಗೆ ಸಿದ್ಧ ಎಂದು ನಿನ್ನೆ ಎನ್ ಸಿಪಿ ಹೇಳಿಕೆ ನೀಡಿತ್ತು.
ಎನ್ ಸಿಪಿಯ ಬೇಡಿಕೆಗೆ ಒಪ್ಪಿರುವ ಶಿವಸೇನೆ, ಎನ್ ಡಿಎ ಕೂಟದಿಂದ ಹೊರಬರಲು ಸಿದ್ಧವಾಗಿದೆ. ಕೇಂದ್ರ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆಯಲಿದ್ದು, ಎನ್ ಸಿಪಿ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಲು ಸಿದ್ಧ ಎಂದು ಸಂಸದ ಸಂಜಯ್ ರಾವತ್ ಹೇಳಿಕೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ರಚಿಸಲು ಆಸಕ್ತಿ ತೋರುತ್ತಿಲ್ಲ. ಕೇವಲ ಎನ್ ಸಿಪಿ ಬೆಂಬಲದಿಂದ ಶಿವಸೇನೆಗೆ ಸರ್ಕಾರ ರಚಿಸಲು ಬೇಕಾಗುವಷ್ಟು ಸ್ಥಾನ ಬಲವಿಲ್ಲ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಸರಳ ಬಹುಮತ ಸಿಗಬೇಕಾದರೆ 1145 ಸ್ಥಾನ ಬಲ ಬೇಕು. ಸದ್ಯಕ್ಕೆ ಶಿವಸೇನೆ 56 ಮತ್ತು ಎನ್ ಸಿಪಿ 54 ಸಂಖ್ಯಾಬಲ ಹೊಂದಿದೆ. ಇವೆರಡರ ಜತೆಗೆ ಕಾಂಗ್ರೆಸ್ ಬೆಂಬಲ ನೀಡಿದರೆ ಮಾತ್ರ ಈ ಮೈತ್ರಿಗೆ ಬಹುಮತ ಸಾಬೀತುಪಡಿಸಲು ಸಾಧ‍್ಯ. ಹೀಗಾಗಿ ಮತ್ತೆ ಅತಂತ್ರ ಸ್ಥಿತಿ ಮುಂದುವರಿಯಲಿದೆ.