ಮುಂಬೈ: ತನ್ನ ಪ್ರಿಯತಮೆಯನ್ನು ಹತ್ಯೆ ಮಾಡಿ ಪಾಗಲ್ ಪ್ರೇಮಿಯೊಬ್ಬ ಆಕೆಯ ಮೃತದೇಹವನ್ನು ಮೂರು ತಿಂಗಳ ಕಾಲ ಜೊತೆಯಲ್ಲೇ ಇಟ್ಟುಕೊಂಡು ಕಾಲ ಕಳೆದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
34 ವರ್ಷದ ಆರೋಪಿ 32 ವರ್ಷದ ಯುವತಿಯನ್ನು ಹತ್ಯೆ ಮಾಡಿದ್ದ. ತನ್ನ ಮನೆಯ ಬಾತ್ ರೂಂನಲ್ಲೇ ದೇಹವಿರಿಸಿದ್ದ. ಪೊಲೀಸರ ಪ್ರಕಾರ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಯುವಕನ ಮನೆಯವರ ಒಪ್ಪಿಗೆಯೂ ಇತ್ತು. ಆದರೆ ಯುವತಿ ಮನೆಯವರಿಗೆ ಒಪ್ಪಿಗೆ ಇರಲಿಲ್ಲ. ಮದುವೆ ಶಾಪಿಂಗ್ ಗೆಂದು ಹೋಗಿದ್ದ ಯುವತಿ ಮನೆಗೆ ಮರಳಿರಲಿಲ್ಲ. ಈ ಬಗ್ಗೆ ಕರೆ ಮಾಡಿದರೂ ಪ್ರತಿಕ್ರಿಯಿಸಿರಲಿಲ್ಲ. ಹೀಗಾಗಿ ಯುವಕನ ಮೇಲೆ ಸಂಶಯಗೊಂಡ ಯುವತಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ವಿಚಾರಣೆ ನಡೆಸಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿತ್ತು. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.