ಚಂಡೀಗಢ : ಗುರು ರವಿದಾಸ್ ಜಯಂತಿ ಇರುವುದರಿಂದ ಫೆಬ್ರವರಿ 14ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಆರು ದಿನಗಳ ಕಾಲ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಮನವಿ ಮಾಡಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರಿಗೆ ಪತ್ರ ಬರೆದಿರುವ ಪಂಜಾಬ್ ಸಿಎಂ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.32 ರಷ್ಟು ಇರುವ ಪರಿಶಿಷ್ಟ ಜಾತಿ ಸಮುದಾಯದ ಕೆಲವು ಪ್ರತಿನಿಧಿಗಳು, ಗುರು ರವಿದಾಸ್ ಅವರ ಜನ್ಮದಿನ ಫೆಬ್ರವರಿಯಲ್ಲೇ ನಡೆಯಲಿದೆ ಎಂದು ನನ್ನ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಚುನಾವಣೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿದ್ದಾರೆ.
ಗುರು ರವಿದಾಸ್ ಅವರ ಜಯಂತಿ ಹಿನ್ನೆಲೆಯಲ್ಲಿ ಪರಿಶಿಷ್ಟ ಸಮುದಾಯದ ಲಕ್ಷಾಂತರ ಜನರು ಉತ್ತರ ಪ್ರದೇಶದ ಬನಾರಸ್ಗೆ ಫೆಬ್ರವರಿ 10ರಿಂದ 16ರವರೆಗೆ ಭೇಟಿ ನೀಡುವ ಸಾಧ್ಯತೆ ಇದೆ.
ಇಂತಹ ಪರಿಸ್ಥಿತಿಯಲ್ಲಿ ಈ ಸಮುದಾಯದ ಅನೇಕ ಜನರು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಮತದಾನ ಅವರ ಸಂವಿಧಾನಬದ್ಧ ಹಕ್ಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.