ಬೆಂಗಳೂರು : ನೂರಾರು ಎಕರೆ ಜಮೀನಿನ ಒಡೆಯ, ಐಷಾರಾಮಿ ಮನೆಯಲ್ಲಿ ಬದುಕ್ತಿದ್ದ ಶಾಸಕ ಮಾಡಾಳ್ ಲೋಕಾಯುಕ್ತ ಕಚೇರಿಯಲ್ಲಿ ವಾಸ್ತವ್ಯ ಕಳೆಯಬೇಕಿದೆ. ಲೋಕಾ ಪೊಲೀಸರು ಕ್ಯಾತಸಂದ್ರ ಬಳಿ ಅರೆಸ್ಟ್ ಬೆನ್ನಲ್ಲೇ ಮಾಡಾಳ್ ರನ್ನ ಲೋಕಾ ಕಚೇರಿಗೆ ಕರೆತಂದ ಬಳಿಕ ತನಿಖಾಧಿಕಾರಿ ಆಂಥೋನಿ ಜಾನ್ ಕೆಲ ಹೊತ್ತು ವಿಚಾರಣೆ ನಡೆಸಿದ್ದಾರೆ.
ಆ ಬಳಿಕ ವಿಶ್ರಾಂತಿ ಮಾಡಲು ಸೂಚಿಸಿದ್ದು, ಮಲಗಲು ಹಾಸಿಗೆ ದಿಂಬಿನ ವ್ಯವಸ್ಥೆ ಮಾಡಿದ್ದಾರೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಮಾಡಾಳ್ ರನ್ನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಕೇಳಲು ಲೋಕಾ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ವಯೋಸಹಜ ಕಾಯಿಲೆಗಳ ಜೊತೆಗೆ ಹಾರ್ಟ್ ಪ್ರಾಬ್ಲಂ ಇರೋದ್ರಿಂದ ರಾತ್ರಿ ಕಣ್ಣಿಟ್ಟು ಕಾಯುವಂತೆ ಪೊಲೀಸರಿಗೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ. ಏನಾದ್ರು ತೊಂದರೆ ಆದಲ್ಲಿ ಕೂಡಲೆ ತಿಳಿಸುವಂತೆ ಸೂಚಿಸಿದ್ದು, ತಡರಾತ್ರಿ ನಂತ್ರ ಮಾಡಾಳ್ ನಿದ್ದೆಗೆ ಜಾರಿದ್ದು, ಇಂದಿನಿಂದ ಅಧಿಕೃತವಾಗಿ 8 ಕೋಟಿ ಹಣದ ಮೂಲದ ವಿಚಾರಣೆ ಆರಂಭವಾಗಲಿದೆ.
ಲೋಕಾಯುಕ್ತ ಟ್ರ್ಯಾಪ್ ಹಾಗೂ ರೇಡ್ ವೇಳೆ ಕಚೇರಿ ಹಾಗೂ ಮನೆಯಲ್ಲಿ ಸಿಕ್ಕ 8 ಕೋಟಿ ಹಣದ ಸಂಬಂಧ ಕೊನೆಗೂ ಬಿಜೆಪಿಯ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅರೆಸ್ಟ್ ಆಗಿದ್ದಾರೆ. ಹೈಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ರದ್ದಾದ ಬೆನ್ನಲ್ಲೆ ಲೋಕಾ ಪೊಲೀಸ್ರು ಮಾಡಾಳ್ ಗಾಗಿ ಹುಡುಕಾಟ ಆರಂಭಿಸಿದ್ದರು. ಬೆಂಗಳೂರು ಕಡೆ ಬರುತ್ತಿದ್ದ ಮಾಡಾಳ್ ರನ್ನ ತುಮಕೂರಿನ ಕ್ಯಾತಸಂದ್ರ ಟೋಲ್ ಬಳಿ ಸಂಜೆ 7 ಗಂಟೆ ವೇಳೆಗೆ ನಡುರಸ್ತೆಯಲ್ಲೇ ಅರೆಸ್ಟ್ ಮಾಡಿದ್ದಾರೆ.