ಲಕ್ನೋ, ಅ.21 : ಭಗವಾನ್ ಬುದ್ಧ ಇಂದಿಗೂ ಮಾನವೀಯತೆಯ ಆತ್ಮದಲ್ಲಿ ನೆಲೆಸಿದ್ದಾರೆ ಮತ್ತು ವಿಭಿನ್ನ ದೇಶ ಹಾಗೂ ಸಂಸ್ಕೃತಿಯ ಕೊಂಡಿಯಾಗಿದ್ದಾರೆ. ಭಾರತದ ಸಂವಿಧಾನಕ್ಕೆ ಅವರು ಇಂದಿಗೂ ಪ್ರೇರಣೆ ಮತ್ತು ಸ್ಫೂರ್ತಿಯಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶದ ಕುಶಿ ನಗರದಲ್ಲಿ ನೂತನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಬಳಿಕ 'ಅಭಿಧಮ್ಮ ದಿನ'ದ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತ್ರಿವರ್ಣ ಧ್ವಜದಲ್ಲಿರುವ ಧಮ್ಮ ಚಕ್ರವು ದೇಶದ ಚಾಲನಾ ಶಕ್ತಿಯಾಗಿದೆ. ಭಾರತದ ಪ್ರಗತಿಯ ಯಾನದಲ್ಲಿ ಬುದ್ಧರ ಚಿಂತನೆ ಮತ್ತು ಬೋಧನೆಯ ಸಾರ ಜತೆಗಿದೆ ಎಂದರು.
ಜ್ಞಾನವನ್ನು ನಿರ್ಬಂಧಿಸುವುದು ಅಥವಾ ಮಹಾನ್ ವ್ಯಕ್ತಿಗಳ ಚಿಂತನೆ ಮಹಾನ್ ಸಂದೇಶಗಳನ್ನು ನಿರ್ಬಂಧಿಸುವುದರಲ್ಲಿ ಭಾರತ ಯಾವತ್ತೂ ವಿಶ್ವಾಸ ಇರಿಸಿಲ್ಲ. ನಮ್ಮದೇನಿದ್ದರೂ ಮಾನವ ಕುಲದೊಂದಿಗೆ ಹಂಚಿಕೊಳ್ಳುವ ಪರಿಕಲ್ಪನೆಯಾಗಿದೆ. ಆದ್ದರಿಂದಲೇ ಅಹಿಂಸೆ ಮತ್ತು ಸಹಾನುಭೂತಿಯಂತಹ ಮಾನವೀಯ ಮೌಲ್ಯಗಳು ಭಾರತೀಯರ ಆತ್ಮದಲ್ಲಿ ಸಹಜವಾಗಿ ನೆಲೆಗೊಂಡಿದೆ. ಭಗವಾನ್ ಬುದ್ಧರ ಬುದ್ಧತತ್ವ ಅಂತಿಮ ಕರ್ತವ್ಯ ಪ್ರಜ್ಞೆಯಾಗಿದೆ.
ಹವಾಮಾನ ಬದಲಾವಣೆಯ ಬಗ್ಗೆ ಆತಂಕ ಹೆಚ್ಚಿರುವ ಇಂದಿನ ದಿನದಲ್ಲಿ ಬುದ್ಧರ ಸಂದೇಶ ಅಳವಡಿಸಿಕೊಂಡರೆ ಈ ಆತಂಕ ಸುಲಭದಲ್ಲಿ ಪರಿಹಾರವಾಗುತ್ತದೆ. ಯಾರು ಮಾಡಬೇಕು ಎಂಬ ಬದಲು ಏನು ನಡೆಯಬೇಕು ಎಂಬುದನ್ನು ಚಿಂತಿಸಿ ಎಂಬ ಬುದ್ಧರ ತತ್ವ ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ. ಅಪ್ ದೀಪೊ ಭವ ಎಂಬ ಬುದ್ಧರ ಮಾತು ನಿಮ್ಮೊಳಗಿನ ಪ್ರಕಾಶವನ್ನು ನೀವೇ ಉದ್ದೀಪನಗೊಳಿಸಬೇಕು ಎಂಬುದಾಗಿದೆ. ಓರ್ವ ವ್ಯಕ್ತಿ ತನ್ನೊಳಗಿನ ಪ್ರಕಾಶವನ್ನು ಬೆಳಗಿಸಿದಾಗ ಇಡೀ ವಿಶ್ವಕ್ಕೆ ಬೆಳಕು ತೋರುತ್ತಾನೆ.
ಸ್ವಾವಲಂಬಿಯಾಗಲು ಈ ಮಾತು ಭಾರತಕ್ಕೆ ಪ್ರೇರಣೆಯಾಗಿದೆ. ಜಗತ್ತಿನ ಎಲ್ಲಾ ದೇಶಗಳ ಅಭಿವೃದ್ಧಿಯಲ್ಲಿ ಭಾಗೀದಾರರಾಗಲು ನಮಗೆ ಶಕ್ತಿ ಒದಗಿಸಿದೆ ಎಂದವರು ಹೇಳಿದರು.