ಈಗಲೂ ನಾನೇ ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಎಂದು ಇತ್ತೀಚಿಗೆ ಐಟಿ ದಾಳಿಗೊಳಗಾಗಿ ತಮ್ಮ ಹುದ್ದೆಯನ್ನು ಕಳೆದುಕೊಂಡಿರುವ ರಾಮ್ ಮೋಹನ್ ರಾವ್ ಹೇಳಿದ್ದಾರೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನ್ನಾಡುತ್ತಿದ್ದ ಅವರು, ನಾನು ಅನಾರೋಗ್ಯದ ನೆಪ ಹೇಳಿ ಆಸ್ಪತ್ರೆ ಸೇರಿರಲಿಲ್ಲ. ನನ್ನನ್ನು ಗೃಹ ಬಂಧನದಲ್ಲಿರಸಲಾಗಿತ್ತು. ಮುಖ್ಯ ಕಾರ್ಯದರ್ಶಿ ಕಚೇರಿ ಮೇಲೆ ದಾಳಿ ನಡೆಸಿರುವುದು ಅಸಂವಿಧಾನಿಕ ಎಂದಿದ್ದಾರೆ.
ನನ್ನ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತ ಪಡಿಸಿದ ಅವರು ತಮ್ಮ ಮನೆಯಲ್ಲಿ ಕೋಟಿ ಕೋಟಿ ರೂಪಾಯಿ ಸಿಕ್ಕಿದ್ದನ್ನು ಅಲ್ಲಗಳೆದಿದ್ದಾರೆ. ನನ್ನ ಮಗನ ಹೆಸರಿನಲ್ಲಿದ್ದ ಶೋಧನೆಯ ವಾರಂಟ್ ಜತೆಗೆ ಬಂದು ನನ್ನ ಮನೆಯನ್ನು ಶೋಧಿಸಲಾಯ್ತು. ಅಂದು ಅವರಿಗೆ ಸಿಕ್ಕಿದ್ದು ಕೇವಲ 1,12,32 ರೂಪಾಯಿ ಮತ್ತು ಪತ್ನಿ ಮತ್ತು ಮಗಳಿಗೆ ಸೇರಿದ್ದ 25ಕೆಜಿ ಒಡವೆ ಎಂದು ಹೇಳಿದ್ದಾರೆ.
ಈಗಲೂ ನಾನೇ ತಮಿಳುನಾಡಿನ ಪ್ರಧಾನ ಕಾರ್ಯದರ್ಶಿ ಎಂದು ವಾದಿಸಿದ ಅವರು, ನಾನು 31 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ನನಗೆ ವರ್ಗಾವಣೆ ಪತ್ರ ನೀಡುವ ತಾಕತ್ತು ಯಾರಿಗೂ ಇಲ್ಲ. ಜಯಲಲಿತಾ ಮೇಡಮ್ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಜಯಾ ಅವರನ್ನು ನೆನಪಿಸಿಕೊಂಡಿದ್ದಾರೆ.
ತಮ್ಮ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಬೆಂಬಲ ವ್ಯಕ್ತ ಪಡಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯವರಿಗೆ ಅವರು ಕೃತಜ್ಞತೆ ವ್ಯಕ್ತ ಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.