ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೆ ಕ್ಷಣಗಣನೆ ಶುರುವಾಗಿದೆ. ಇದೀಗ ರಾಮಮಂದಿರ ಟ್ರಸ್ಟ್ ಶ್ರೀರಾಮಚಂದ್ರನಿಗೆ ಆರತಿ ಬೆಳಗಲು ವಿಶೇಷ ಪಾಸ್ ವ್ಯವಸ್ಥೆ ಮಾಡಿದೆ.
ಭಕ್ತಾದಿಗಳು ಶ್ರೀರಾಮನಿಗೆ ಆರತಿ ಸೇವೆ ಮಾಡಲು ರಾಮಮಂದಿರ ಟ್ರಸ್ಟ್ ಪಾಸ್ ಒದಗಿಸಲಿದೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಮೊದಲು ಆರತಿ ಸೇವೆ ಮಾಡಿಸಬಹುದಾಗಿದೆ.
ಇದಕ್ಕಾಗಿ ಆನ್ ಲೈನ್ ನಲ್ಲೇ ಬುಕಿಂಗ್ ಮಾಡಿ ಪಾಸ್ ಪಡೆದುಕೊಳ್ಳಬಹುದಾಗಿದೆ. ಆರತಿಗೆ ಹಾಜರಾಗಲು ಬಯಸುವ ವ್ಯಕ್ತಿಗಳು ಆನ್ ಲೈನ್ ನಲ್ಲಿ ಪಾಸ್ ಪಡೆಯಬಹುದು. ಮೂರು ಆರತಿಗಳಿಗೆ ತಲಾ 20 ಪಾಸ್ ಒದಿಗಿಸಲಾಗುತ್ತದೆ. ಭಗವಾನ್ ಶ್ರೀರಾಮಚಂದ್ರನಿಗೆ ದಿನಕ್ಕೆ ಮೂರು ಬಾರಿ ಆರತಿ ಮಾಡಲಾಗುತ್ತದೆ. ಪಾಸ್ ಮಾಡಿಸಿಕೊಂಡವರು ಆರತಿಯಲ್ಲಿ ಭಾಗಿಯಾಗಬಹುದಾಗಿದೆ. ಪಾಸ್ ನೊಂದಿಗೆ ಪ್ರತೀ ಆರತಿಯಲ್ಲಿ 30 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ.
ಅದಕ್ಕಾಗಿ ಪ್ರತ್ಯೇಕ ವೆಬ್ ಸೈಟ್ ಇದೆ. srjbtkshetra.org ಎಂಬ ವೆಬ್ ಸೈಟ್ ವಿಳಾಸದಲ್ಲಿ ಪಾಸ್ ಬುಕ್ ಮಾಡಬಹುದು. ಆರತಿ ವಿಭಾಗವನ್ನು ಕ್ಲಿಕ್ ಮಾಡಿ ನೀವು ಹಾಜರಾಗುವ ಆರತಿ ದಿನಾಂಕ, ಸಮಯವನ್ನು ಆಯ್ಕೆ ಮಾಡಬೇಕು. ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮುಂತಾದ ಮಾಹಿತಿ ಕಡ್ಡಾಯವಾಗಿ ಒದಗಿಸಬೇಕು. ಬಳಿಕ ಕೌಂಟರ್ ನಿಂದ ನಿಮ್ಮ ಪಾಸ್ ಗಳನ್ನು ಸಂಗ್ರಹಿಸಿ ಆರತಿ ಸಮಾರಂಭದಲ್ಲಿ ಭಾಗಿಯಾಗಬಹುದು. ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಮತ್ತು ಪಾಸ್ ಪೋರ್ಟ್ ಈ ನಾಲ್ಕರಲ್ಲಿ ಯಾವುದಾದರೂ ಒಂದು ದಾಖಲೆ ಅಗತ್ಯ.