ನವದೆಹಲಿ: ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದ ಅವರ ಹೆಂಡತಿ ಹಾಗೂ ತಾಯಿ ಜತೆ ಪಾಕ್ ತೀರ ಅಮಾನವೀಯವಾಗಿ ನಡೆದುಕೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಕುಲಭೂಷಣ್ ಅವರನ್ನು ಭೇಟಿಗೆ ಮೊದಲು ಅವರ ತಾಯಿ ಹಾಗೂ ಹೆಂಡತಿಯ ಬಟ್ಟೆ ಬದಲಾಯಿಸಲು ಹೇಳಲಾಗಿತ್ತು. ನಂತರ ಮಾಂಗಲ್ಯ, ಬಿಂದಿ ಮತ್ತು ಬಳೆಯನ್ನು ತೆಗೆಸಿ ಇಬ್ಬರನ್ನು ವಿಧವೆಯರಂತೆ ತೋರಿಸಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ತಾಯಿಯ ಕತ್ತಿನಲ್ಲಿ ತಾಳಿ ಇಲ್ಲದ್ದನ್ನು ನೋಡಿ 'ಬಾಬಾ ಹೇಗಿದ್ದಾರೆ' ಎಂದು ಕುಲಭೂಷಣ್ ತಾಯಿಯನ್ನು ನೋಡಿದ ತಕ್ಷಣ ಕೇಳಿದ ಮೊದಲ ಪ್ರಶ್ನೆಯಾಗಿತ್ತು. ಎಂದು ಸುಷ್ಮಾ ಸ್ವರಾಜ್ ಅವಂತಿ ಅವರು ಹೇಳಿದ ಮಾತನ್ನು ತಿಳಿಸಿದ್ದಾರೆ. ಕುಲಭೂಷಣ್ ಒತ್ತಡಕ್ಕೊಳಗಾಗಿದ್ದಾರೆ. ಅವರನ್ನು ಪಾಕಿಸ್ತಾನ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ, ಕುಲಭೂಷಣ್ ಅವರ ವಿಷಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಇನ್ನು ಜಾಧವ್ ಅವರ ಪತ್ನಿಯ ಶೂಗಳಲ್ಲಿ ಲೋಹದ ವಸ್ತುಗಳಿವೆಯೆಂದು ಆರೋಪಿಸಿ ಅವುಗಳನ್ನು ಪಾಕಿಸ್ತಾನ ವಶಪಡಿಸಿಕೊಂಡು ಹಿಂದಿರುಗಿಸದೇ ಇದ್ದ ಕ್ರಮವನ್ನು 'ವಿಚಿತ್ರ' ಎಂದ ಸುಷ್ಮಾ ಸ್ವರಾಜ್ ಶೂಗಳಲ್ಲಿ ಕ್ಯಾಮೆರಾ, ಚಿಪ್ ಅಥವಾ ರೆಕಾರ್ಡರ್ ಇರಬಹುದು ಎಂದು ಅವರು ಹೇಳುತ್ತಿದ್ದರು ಆದರೆ ಏರ್ ಇಂಡಿಯಾ ಮತ್ತು ಎಮಿರೇಟ್ಸ್ ವಿಮಾನಗಳಲ್ಲಿ ಭದ್ರತಾ ತಪಾಸಣೆ ದಾಟಿಯೇ ಈ ಶೂಗಳು ಬಂದಿವೆ. ಪಾಕಿಸ್ತಾನ ಪ್ರವೇಶಿಸಿದ ಮೇಲೆ ಚಿಪ್ ಬಂತೇ? ಎಂದು ಸುಷ್ಮಾ ಪ್ರಶ್ನೆ ಎತ್ತಿದ್ದಾರೆ.