Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎ. ಸಿ. ಬಿ. ವಿರುದ್ಧ ಹೈಕೋರ್ಟ್ ಗರಂ

ಎ. ಸಿ. ಬಿ. ವಿರುದ್ಧ ಹೈಕೋರ್ಟ್ ಗರಂ
ಬೆಂಗಳೂರು , ಮಂಗಳವಾರ, 5 ಜುಲೈ 2022 (14:06 IST)
ಭ್ರಷ್ಟಾಚಾರ ನಿಗ್ರಹ ದಳ ಎಸಿಬಿಯು 'ಕಲೆಕ್ಷನ್ ಸೆಂಟರ್' ಆಗಿದೆ, ಎಸಿಬಿ ಭ್ರಷ್ಟಾಚಾರದ ಕೂಪವಾಗಿದೆ, ಅದರ ಮುಖ್ಯಸ್ಥರೇ ಕಳಂಕಿತ ವ್ಯಕ್ತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಈಗ ವರ್ಗಾವಣೆ ಬೆದರಿಕೆಗೆ ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಹೈಕೋರ್ಟ್​ನಲ್ಲಿ ಸೋಮವಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಯ ವಿರುದ್ಧದ ಲಂಚ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಸಭಾಂಗಣದಲ್ಲೇ ತಮಗೆ ಪರೋಕ್ಷವಾಗಿ ವರ್ಗಾವಣೆ ಬೆದರಿಕೆ ಬಂದಿರುವ ವಿಚಾರ ತಿಳಿಸಿ ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ವರ್ಗಾವಣೆ ಬೆದರಿಕೆ ಎದುರಿಸಲು ಸಿದ್ಧವಿರುವುದಾಗಿ ಹೇಳಿದರು.
 
ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಪಿ.ಎಸ್‌. ಮಹೇಶ್‌ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಸಂದೇಶ್‌, 'ಸಾಂವಿಧಾನಿಕ ಹುದ್ದೆ ನಿಭಾಯಿಸುವ ನ್ಯಾಯಮೂರ್ತಿಗಳು ಯಾವುದೇ ಪಕ್ಷದ ಸಿದ್ಧಾಂತದ ಪರವಾಗಿ ಇರಬಾರದು. ರಾಜ್ಯ ಸರ್ಕಾರ ಐಎಎಸ್‌ ಮತ್ತು ಐಪಿಎಸ್‌ ಲಾಬಿಯ ಆಣತಿಯಂತೆ ನಡೆಯುತ್ತಿದ್ದು ಸರ್ಕಾರವೂ ಅಪರಾಧದ ಭಾಗವಾಗಿದೆ' ಎಂದು ಆರೋಪಿಸಿದರು.
 
ಬೆಳಗಿನ ಕಲಾಪದಲ್ಲಿ, 'ನನಗೆ ವರ್ಗಾವಣೆ ಬೆದರಿಕೆ ಹಾಕಿದ ನ್ಯಾಯಮೂರ್ತಿ ಯಾರು ಎಂಬ ವಿವರವನ್ನೆಲ್ಲಾ ಮಧ್ಯಾಹ್ನದ ಕಲಾಪದಲ್ಲಿ ಆದೇಶದಲ್ಲೇ ಬರೆಯಿಸಿ ತೀರುತ್ತೇನೆ' ಎಂದು ಪಟ್ಟು ಹಿಡಿದಿದ್ದರು. ಮಧ್ಯಾಹ್ನ ಕಲಾಪ ಮುಂದುವರಿದಾಗ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಹಾಜರಾಗಿ, 'ಸರ್ಕಾರ ಯಾರನ್ನೂ ರಕ್ಷಣೆ ಮಾಡುತ್ತಿಲ್ಲ. ನಿಮಗೆ ನೋವು ಎನಿಸಿದ್ದರೆ ಅದು ನಮಗೇನೂ ಖುಷಿ ಉಂಟು ಮಾಡುವ ಸಂಗತಿಯಾಗಿರುವುದಿಲ್ಲ. ಆದ್ದರಿಂದ, ತಾವು ಯಾವುದಕ್ಕೂ ಬೇಸರ ಮಾಡಿಕೊಳ್ಳಬಾರದು. ಎಸಿಬಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನೂ ನೀಡುತ್ತೇವೆ. ಬಿ ರಿಪೋರ್ಟ್‌ನ ಸಂಪೂರ್ಣ ಮಾಹಿತಿಯನ್ನೂ ಕೊಡುತ್ತೇವೆ. ಸರ್ಕಾರ ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ' ಎಂಬ ಭರವಸೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಲೌಡ್‌ ಸ್ಪೀಕರ್‌ ತೆರವು : ಯೋಗಿ ಆದಿತ್ಯನಾಥ್