Publish Date: Thu, 18 Aug 2022 (17:21 IST)
Updated Date: Thu, 18 Aug 2022 (17:23 IST)
ಮುಂಬೈ : ಎಕೆ 47 ರೈಫಲ್ ಹಾಗೂ ಮದ್ದುಗುಂಡುಗಳನ್ನು ಒಳಗೊಂಡ ಅನೇಕ ಶಸ್ತ್ರಾಸ್ತ್ರಗಳಿದ್ದ ದೋಣಿಯೊಂದು ಮಹಾರಾಷ್ಟ್ರದ ರಾಯಗಢದ ಸಮುದ್ರದಲ್ಲಿ ಪತ್ತೆ ಆಗಿದೆ.
ರಾಯಗಢದ ಹರಿಹರೇಶ್ವರ ಬೀಚ್ ಬಳಿ ಬೋಟ್ ಪತ್ತೆ ಆಗಿದ್ದು, ಅದರಲ್ಲಿ ಅನೇಕ ಮದ್ದುಗುಂಡುಗಳು ಹಾಗೂ 3 ಎಕೆ 47 ರೈಫೆಲ್ಗಳು ಪತ್ತೆಯಾಗಿವೆ. ಈ ಎಲ್ಲಾ ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆ ಪ್ರದೇಶವನ್ನು ಹೈಅಲರ್ಟ್ ಎಂದು ಘೋಷಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಬಂಧಿಸಿ ರಾಯಗಢ ಜಿಲ್ಲೆ ಹಾಗೂ ಸಮೀಪದ ಪ್ರದೇಶಗಳಲ್ಲಿ ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.
ದೋಣಿ ಪತ್ತೆಯಾದ ಸ್ಥಳವು ಮುಂಬೈನಿಂದ 200ಕಿ.ಮೀ ಹಾಗೂ ಪುಣೆಯಿಂದ 120 ಕಿ.ಮೀ ದೂರದಲ್ಲಿದ್ದು, ಗಣೇಶ ಹಬ್ಬಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಇರುವಾಗಲೇ ಶಸ್ತ್ರಾಸ್ತ್ರ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ 26/11 ಮುಂಬೈ ದಾಳಿ ಮಾದರಿಯಲ್ಲಿಯೇ ಮತ್ತೊಂದು ದಾಳಿ ನಡೆಸುವ ಯೋಜನೆ ಇದು ಎಂದು ಹೇಳಲಾಗಿದೆ.