ಗೌಪ್ಯ ಮತದಾನದ ನಿಯಮ ಉಲ್ಲಂಘಿಸಿದ ಆರೋಪದಿಂದ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರಿಗೆ ಚುನಾವಣಾಧಿಕಾರಿ ಕ್ಲೀನ್ ಚಿಟ್ ಲಭಿಸಿದೆ.
ಶುಕ್ರವಾರ ನಡೆದ ರಾಜ್ಯಸಭಾ ಮತದಾನದ ವೇಳೆ ಎಚ್.ಡಿ. ರೇವಣ್ಣ ಬ್ಯಾಲೆಟ್ ಪೇಪರ್ ಅನ್ನು ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರಿಗೆ ಪ್ರದರ್ಶಿಸಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ ಮತ್ತು ಬಿಜೆಪಿ ಚುನಾವಣಾಧಿಕಾರಿಗೆ ರೇವಣ್ಣ ಅವರ ಮತವನ್ನು ಅಸಿಂಧುಗೊಳಿಸುವಂತೆ ಮನವಿ ಮಾಡಿತ್ತು.
ಎಚ್.ಡಿ. ರೇವಣ್ಣ ನಾನು ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೂ ಚುನಾವಣಾಧಿಕಾರಿ ವಿಶಾಲಕ್ಷಿ, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು.
ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಎಚ್.ಡಿ.ರೇವಣ್ಣ ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಸ್ಪಷ್ಟವಾಗಿದೆ. ಆದ್ದರಿಂದ ಅವರು ಸೇರಿದಂತೆ ಎಲ್ಲರ ಮತಗಳು ಸಿಂಧುವಾಗಿದೆ ಎಂದು ಚುನಾವಣಾಧಿಕಾರಿ ವಿಶಾಲಕ್ಷಿ ಘೋಷಿಸಿದ್ದಾರೆ.