ಹರ್ಯಾಣ: ಇಷ್ಟು ದಿನ ಕುಸ್ತಿ ಅಖಾಡದಲ್ಲಿ ಎದುರಾಳಿಗಳಿಗೆ ಬೆವರಿಳಿಸುತ್ತಿದ್ದ ಕುಸ್ತಿಪಟು ವಿನೇಶ್ ಫೋಗಟ್ ಈಗ ರಾಜಕೀಯ ಕುಸ್ತಿಯಲ್ಲೂ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಜೂಲಾನ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿನೇಶ್ ಗೆಲುವು ಸಾಧಿಸಿದ್ದಾರೆ.
ಈ ಗೆಲುವು ಕೂಡಾ ಅವರಿಗೆ ಕುಸ್ತಿ ಪಂದ್ಯಕ್ಕಿಂತ ಕಡಿಮೆಯೇನಾಗಿರಲಿಲ್ಲ. ವಿನೇಶ್ ಗೆ ಗೆಲುವು ಅಷ್ಟು ಸುಲಭವಾಗಿ ದಕ್ಕಲಿಲ್ಲ. ಎದುರಾಳಿ ಯೋಗೇಶ್ ಎದುರು ಕೊನೆಗೂ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರಂಭಿಕ ಹಂತದಲ್ಲಿ ಒಮ್ಮೆ ಮುನ್ನಡೆಯಲ್ಲಿದ್ದ ವಿನೇಶ್ ಬಳಿಕ ಕೆಲವು ಹೊತ್ತು ಹಿನ್ನಡೆಯಲ್ಲಿದ್ದರು.
ಹೀಗಾಗಿ ಅವರಿಗೆ ಗೆಲುವು ಕಷ್ಟ ಎನ್ನಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಮತ್ತೆ ಮೇಲೆದ್ದ ವಿನೇಶ್ ಈಗ ಗೆಲುವಿನ ಹಾರ ಹಾಕಿಕೊಂಡಿದ್ದಾರೆ. ಕೇಂದ್ರದ ವಿರುದ್ಧ ಕುಸ್ತಿ ಫೆಡರೇಷನ್ ವಿಚಾರದಲ್ಲಿ ತೊಡೆ ತಟ್ಟಿದ್ದ ವಿನೇಶ್ ಗೆ ಈ ಗೆಲುವು ಅನಿವಾರ್ಯವಾಗಿತ್ತು.
ಆದರೆ ಹರ್ಯಾಣದಲ್ಲಿ ಈ ಬಾರಿ ಅಧಿಕಾರಕ್ಕೇರುತ್ತದೆ ಎಂಬ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ಗೆ ಮಾತ್ರ ಮುಖಭಂಗವಾಗಿದೆ. ಇತ್ತೀಚೆಗಿನ ವರದಿ ಪ್ರಕಾರ 36 ಕ್ಷೇತ್ರಗಳಲ್ಲಷ್ಟೇ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಆದರೆ ವಿನೇಶ್ ಫೋಗಟ್ ಗೆಲುವು ಕಾಂಗ್ರೆಸ್ ಗೆ ಬಲ ನೀಡಲಿದೆ. ಕೊನೆಯ ಕ್ಷಣದಲ್ಲಿ ಪಕ್ಷ ಸೇರಿದ್ದರೂ ವಿನೇಶ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.