ಬಿಜೆಪಿಗೆ ಸೇರ್ಪಡೆಯಾದ ಇಬ್ಬರು ಮುಖಂಡರು ಪಕ್ಷ ಹಣ ನೀಡಿ ಇತರ ನಾಯಕರನ್ನು ಖರೀದಿಸುತ್ತಿದೆ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಗುಜರಾತ್ ಅಮೂಲ್ಯವಾಗಿದೆ. ಅಲ್ಲಿನ ಮತದಾರರನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಗುಜರಾತ್ ಅಮೂಲ್ಯವಾದುದು. ಗುಜರಾತ್ ಎಂದಿಗೂ ಖರೀದಿಸಲ್ಪಟ್ಟಿಲ್ಲ. ಅದನ್ನು ಎಂದಿಗೂ ಖರೀದಿಸಬಾರದು. ಎಂದಿಗೂ ಖರೀದಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿಗೆ ಸೇರ್ಪಡೆಗೊಂಡು ನಂತರ ಪಟಿದಾರ್ ಅನಾಮತ್ ಅಂದೋಲನ್ ಸಮಿತಿಗೆ ವಾಪಸ್ ಮರಳಿದ ನರೇಂದ್ರ ಪಟೇಲ್ ಮತ್ತು ನಿಖಿಲ್ ಸಾವಾನಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಪಕ್ಷದ ನಾಯಕರು 1 ಕೋಟಿ ರೂಪಾಯಿಗಳ ಆಮಿಷವೊಡ್ಡಿದ್ದರು. ಮುಂಗಡವಾಗಿ 10 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಸೋಮುವಾರದಂದು 90 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದ್ದಾಗಿ ಹೊಸ ಬಾಂಬ್ ಸ್ಫೋಟಿಸಿದ್ದಾರೆ.
ಪಟಿದಾರ್ ಸಮುದಾಯದ ಇತರ ನಾಯಕರಿಗೂ ಬಿಜೆಪಿ ಹಣದ ಆಮಿಷವೊಡ್ಡುತ್ತಿದೆ. ಏತನ್ಮಧ್ಯೆ, ಕಾಂಗ್ರೆಸ್ ಪಕ್ಷವನ್ನು ಸೇರಲು ಪಟಿದಾರ್ ಮುಖಂಡ ಹಾರ್ದಿಕ್ ಪಟೇಲ್ ನಿರಾಕರಿಸಿದ್ದು, ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲು ಸಿದ್ದನಿದ್ದೇನೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಪರವಾಗಿ ನರೇಂದ್ರ ಪಟೇಲ್ ಇಂತಹ ನಾಟಕವಾಡುತ್ತಿದ್ದಾರೆ ಎಂದು ಗುಜರಾತ್ ಬಿಜೆಪಿ ವಕ್ತಾರ ಭರತ್ ಪಾಂಡ್ಯ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.