ಡಿಜಿಟಲ್ ವ್ಯವಹಾರಗಳು ಹೆಚ್ಚುತ್ತಿರುವ ಬೆನ್ನಲ್ಲೇ ಆರ್ಬಿಐ ಒಂದು ಮಹತ್ವದ ಘೋಷಣೆ ಮಾಡಿದೆ.
ಅತಿಶೀಘ್ರದಲ್ಲಿಯೇ ಫೀಚರ್ ಫೋನ್ಗಳಲ್ಲೂ ಕೂಡ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಅಂದರೆ ಇನ್ನುಮುಂದೆ ಫೀಚರ್ ಫೋನ್ಗಳಲ್ಲೂ ಕೂಡ ಏಕೀಕೃತ ಪಾವತಿ ಇಂಟರ್ಫೇಸ್ ಆಧಾರಿತ ವೈಶಿಷ್ಟ್ಯಗಳು ಸಿಗುವಂತೆ ಆರ್ಬಿಐ ರೂಪಿಸಲಿದೆ.
ಹಾಗೇ, ಇದು ಮುಂಬರುವ ದಿನಗಳಲ್ಲಿ ಇಂಟರ್ನೆಟ್ ಮುಕ್ತ ಯುಪಿಐ ಪಾವತಿಯನ್ನು ಸಾಧ್ಯವಾಗಿಸುತ್ತದೆ. ಇತ್ತೀಚೆಗೆ ನಡೆದ ದ್ವೈಮಾಸಿಕ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾಗಿ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಈಗೀಗ ದೇಶದಲ್ಲಿ ಡಿಜಿಟಲ್ ಮಾದರಿಯ ಯುಪಿಐ ಪಾವತಿಯೇ ಹೆಚ್ಚಾಗಿದೆ. ಹಾಗಾಗಿ ಈ ಯುಪಿಐ ಪಾವತಿ ವ್ಯವಸ್ಥೆಯನ್ನು ಸರಳೀಕೃತಗೊಳಿಸಲು ಶಕ್ತಿಕಾಂತ್ ದಾಸ್ ಅವರು ಮೂರು ಕ್ರಮಗಳನ್ನು ಪ್ರಸ್ತಾಪಿಸಿದ್ದಾರೆ.
ದೇಶದಲ್ಲಿ ಒಟ್ಟಾರೆ ವ್ಯವಹಾರದಲ್ಲಿ ಬಳಕೆಯಾಗುವ ಏಕೈಕ ಅತ್ಯಂತ ದೊಡ್ಡ ಚಿಲ್ಲರೆ ಪಾವತಿ ವ್ಯವಸ್ಥೆಯೆಂದರೆ ಯುಪಿಐ. ಇದನ್ನು ಅನೇಕ ಜನರು ಬಳಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಕಡಿಮೆ ಮೊತ್ತದ ಪಾವತಿ ವ್ಯವಸ್ಥೆಯಲ್ಲಿ ಬಹುಮುಖ್ಯವಾಗಿ ಬಳಕೆಯಾಗುತ್ತದೆ.