Publish Date: Fri, 29 May 2026 (14:14 IST)
Updated Date: Fri, 29 May 2026 (14:16 IST)
ನವದೆಹಲಿ: ತಮ್ಮ ಮನೆಯಲ್ಲಿದ್ದ ಏರ್ ಕಂಡಿಷನಿಂಗ್ (ಎಸಿ) ಸ್ಫೋಟಗೊಂಡ ಪರಿಣಾಮ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಭಾರತೀಯ ಸ್ಪರ್ಧಾ ಆಯೋಗದ ಮೊದಲ ಅಧ್ಯಕ್ಷ ಧನೇಂದ್ರ ಕುಮಾರ್ ದಾರುಣವಾಗಿ ಸಾವನ್ನಪ್ಪಿದ್ದಾರೆ.
ದೆಹಲಿಯ ಹೌಜ್ ಖಾಸ್ನಲ್ಲಿರುವ ಧನೇಂದ್ರ ಕುಮಾರ್ ಅವರ ಮನೆಯಲ್ಲಿ ಎಸಿ ಸ್ಫೋಟ ಉಂಟಾಗಿದೆ. ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ಧನೇಂದ್ರ ಕುಮಾರ್ ಅವರ ಮಗ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆಯಲ್ಲಿ 80 ವರ್ಷದ ಧನೇಂದ್ರ ಕುಮಾರ್, ಅವರ ಮಗ ಸೇರಿದಂತೆ ಒಟ್ಟು ಐವರು ಇದ್ದರು. ಉಳಿದವರು ಅಪಾಯದಿಂದ ಪಾರಾಗಿದ್ದಾರೆ. ಸ್ಪೋಟದ ಬಳಿಕ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿತ್ತು. ಧನೇಂದ್ರ ಕುಮಾರ್ ಅವರು ಹೊಗೆಯಿಂದ ಉಸಿರಾಟದ ತೊಂದರೆ ಅನುಭವಿಸಿ ಸಾವನ್ನಪ್ಪಿದ್ದಾರೆ.
ಮನೆಯಲ್ಲಿ ಅಳವಡಿಸಲಾದ ಹವಾನಿಯಂತ್ರಣ ವ್ಯವಸ್ಥೆಯ ಒಳಾಂಗಣದಲ್ಲಿ ಸ್ಫೋಟ ಉಂಟಾಗಿ ಹೊಗೆ, ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಧನೇಂದ್ರ ಕುಮಾರ್ ಅವರ ಮನೆ ಸಂಪೂರ್ಣವಾಗಿ ಸುಟ್ಟುಹೋಗಿದೆ. ಇದರಲ್ಲಿ ಯಾವುದೇ ಅನುಮಾನಸ್ಪದ ಸಂಗತಿ ಕಂಡು ಬಂದಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
1968 ರ ಬ್ಯಾಚ್ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ಧನೇಂದ್ರ ಕುಮಾರ್ ಅವರು ಕೇಂದ್ರ ಮತ್ತು ಹರಿಯಾಣ ಸರ್ಕಾರಗಳಲ್ಲಿ ಹಲವಾರು ಹಿರಿಯ ಹುದ್ದೆಗಳನ್ನು ಅಲಂಕರಿಸಿದ್ದರು. ದೇಶದ ಸ್ಪರ್ಧಾ ಕಾನೂನು ಮತ್ತು ಆರ್ಥಿಕ ಸುಧಾರಣೆಗಳಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದರು.
ರಕ್ಷಣೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಸಂಸ್ಕೃತಿ ಸಚಿವಾಲಯ ಸೇರಿದಂತೆ ಹಲವಾರು ಕೇಂದ್ರ ಸರ್ಕಾರದ ಸಚಿವಾಲಯಗಳಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ ಅವರು ರಾಷ್ಟ್ರೀಯ ಭದ್ರತೆ, ಆಡಳಿತಾತ್ಮಕ ವಿಷಯಗಳು, ಮೂಲಸೌಕರ್ಯ ಮತ್ತು ಹೆದ್ದಾರಿ ಯೋಜನೆಗಳಿಗೆ ಸಂಬಂಧಿಸಿದ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದರು. ಗ್ರಾಮೀಣ ವಿದ್ಯುದೀಕರಣ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿಯೂ ಧನೇಂದ್ರ ಕುಮಾರ್ ಸೇವೆ ಸಲ್ಲಿಸಿದ್ದಾರೆ. ಭಾರತದ ಸ್ಪರ್ಧಾ ಆಯೋಗದ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದ ಅವರು 2009 ರಿಂದ 2011 ರವರೆಗೆ ಹಲವಾರು ಪ್ರಮುಖ ಕ್ರಮಗಳನ್ನು ತೆಗೆದುಕೊಂಡರು.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ