ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಇಂದು 2017-2018ರ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ನೋಟು ನಿಷೇಧದ ಬಳಿಕ ಮಂಡಿಸಲಾಗುತ್ತಿರುವ ಮೊದಲ ಬಜೆಟ್ ಆಗಿರುವುದರಿಂದ ಜನತೆಯಲ್ಲಿ ಭಾರೀ ನಿರೀಕ್ಷೆ ಹುಟ್ಟಿದೆ. ಮೋದಿ ಸರ್ಕಾರ ಮಂಡಿಸುತ್ತಿರುವ ನಾಲ್ಕನೆಯ ಬಜೆಟ್ ಇದಾಗಿದೆ.
ನೋಟು ನಿಷೇಧದ ಬಳಿಕ ಮಂದಗತಿಗೆ ತಿರುಗಿರುವ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ಬಜೆಟ್ ಹೊರಬೀಳಲಿದೆ ಎಂದು ಭಾವಿಸಲಾಗಿದೆ.
ಇಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರ ವಿತ್ತ ಸಚಿವರು ಬಜೆಟ್ ಮಂಡಿಸಲಿದ್ದಾರೆ. ಸಾಮಾನ್ಯ ಬಜೆಟ್ನಲ್ಲಿ ರೈಲ್ವೆ ಬಜೆಟ್ ವಿಲೀನ ಮತ್ತು, ವಾಡಿಕೆಗಿಂತ ಒಂದು ತಿಂಗಳು ಮೊದಲು ಬಜೆಟ್ ಮಂಡನೆಯಾಗುತ್ತಿರುವುದು ಈ ಬಾರಿಯ ವಿಶೇಷ.
ನೋಟು ನಿಷೇಧದ ಸಂದರ್ಭದಲ್ಲಿ ಪ್ರಧಾನಿ ಮೋದಿ ಕೆಲ ಭರವಸೆಗಳನ್ನು ನೀಡಿದ್ದರಾದ್ದರಿಂದ ಇಂದು ಮಂಡನೆಯಾಗುತ್ತಿರುವ ಬಜೆಟ್ ಬಗ್ಗೆ ಜನರಲ್ಲಿ ಅಪಾರ ನಿರೀಕ್ಷೆಗಳಿವೆ. ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಯಾವುದೇ ಹೊರೆಯಾಗದ ಬಜೆಟ್ ಇದಾಗಲಿದೆ ಎಂದು ಹೇಳಲಾಗುತ್ತಿದೆ.
ಕಪ್ಪುಕುಳಗಳು ಮತ್ತು ಧನವಂತರ ಜೇಬಿಗೆ ಜೇಟ್ಲಿ ಕತ್ತರಿ ಹಾಕುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದ್ದು, ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡುವ ವಿಶ್ವಾಸ ಆರ್ಥಿಕ ತಜ್ಞರದ್ದಾಗಿದೆ.