ಮೈಸೂರು: ಇಂದು ಬೆಳಿಗ್ಗೆ ಮತ್ತು ಸಂಜೆ ನಡೆದ ತಾಲೀಮಿನಲ್ಲಿ ನಿನ್ನೆ ಮೈಸೂರು, ಊಟಿ ರಸ್ತೆಯಲ್ಲಿ ಓಡಾಟ ಮಾಡಿ ಆತಂಕ ಸೃಷ್ಟಿಸಿದ್ದ ಧನಂಜಯ ಹಾಗೂ ಕಂಜನ್ ಆನೆಗಳು ಭಾಗವಹಿಸಿದ್ದವು. 'ವರಲಕ್ಷ್ಮಿ' ಆನೆ ಬಿಟ್ಟು ಉಳಿದ 13 ಆನೆಗಳಿಗೂ ತಾಲೀಮು ನೀಡಲಾಯಿತು.
ಶುಕ್ರವಾರ ರಾತ್ರಿ ಅಂಬಾವಿಲಾಸ ಅರಮನೆಯ ಜಯಮಾರ್ತಾಂಡ ಗೇಟ್‌ನಲ್ಲಿ ಬ್ಯಾರಿಕೇಡ್ ತಳ್ಳಿ ಹೊರಬಂದು ರಸ್ತೆಯಲ್ಲಿ ಅಡ್ಡದಿಡ್ಡಿ ಓಡಾಟ ಮಾಡಿ ಆತಂಕ ಸೃಷ್ಟಿಸಿತ್ತು. ರಾತ್ರಿ ಊಟದ ಸಮಯದಲ್ಲಿ ಎರಡೂ ಆನೆಗಳು ಜಗಳವಾಡಿದ್ದರಿಂದ ಅವುಗಳನ್ನು ಮಾವುತರು ಹಾಗೂ ಕಾವಾಡಿಗಳು ಅರಮನೆ ಆವರಣದೊಳಗೆ ನಿಯಂತ್ರಿಸುವುದು ಸಾಧ್ಯವಾಗಿರಲಿಲ್ಲ.
ಧನಂಜಯ ಆನೆಯು ಕಂಜನ್ ಆನೆಯನ್ನು ಅಟ್ಟಾಡಿಸಿಕೊಂಡು ಬಂದಿತ್ತು. ಕಂಜನ್ ಘೀಳಿಡುತ್ತಾ ರಸ್ತೆಗೆ ಬಂದಿದ್ದ. ರಾತ್ರಿ ವೇಳೆ ಹೆಚ್ಚಿನ ವಾಹನಗಳು ಹಾಗೂ ಜನರಿಲ್ಲದ ಕಾರಣ ದೊಡ್ಡ ಅವಘಡ ತಪ್ಪಿದೆ. ನಂತರ ಮಾವುತ ಹಾಗೂ ಕಾವಾಡಿಗಳು ಕೆಲವೇ ಹೊತ್ತಿನಲ್ಲಿ ಅವುಗಳನ್ನು ನಿಯಂತ್ರಿಸಿದರು.
ಆನೆಗಳ ವರ್ತನೆಗೆ ಏನು ಕಾರಣವೆಂಬುದು ಯಾರಿಗೂ ಗೊತ್ತಾಗಿಲ್ಲ. ಸದ್ಯ ಹಾನಿಯಾಗಿಲ್ಲ. ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಲಾಗಿದೆ.<>