Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನವದೆಹಲಿ : ದೇಶದಲ್ಲಿ ಡ್ರೋನ್ಗಳನ್ನು ಚಲಾಯಿಸಲು ಡ್ರೋನ್ ಪೈಲಟ್ ಪರವಾನಗಿ ಅಗತ್ಯವನ್ನು ನಾಗರಿಕ ವಿಮಾನಯಾನ ಸಚಿವಾಲಯ ಶುಕ್ರವಾರ ರದ್ದುಗೊಳಿಸಿದೆ.
ಡಿಜಿಸಿಎ-ಅನುಮೋದಿತ ಡ್ರೋನ್ ಶಾಲೆಯಿಂದ ಸಿಂಗಲ್ ವಿಂಡೋ ಡಿಜಿಟಲ್ ಸ್ಕೈ ಪ್ಲಾಟ್ಫಾರ್ಮ್ ಮೂಲಕ ನೀಡಲಾದ ರಿಮೋಟ್ ಪೈಲಟ್ ಪ್ರಮಾಣಪತ್ರ ಭಾರತದಲ್ಲಿ ಡ್ರೋನ್ ಕಾರ್ಯನಿರ್ವಹಿಸಲು ಸಾಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾಣಿಜ್ಯೇತರ ಉದ್ದೇಶಗಳಿಗಾಗಿ 2 ಕೆಜಿ ವರೆಗಿನ ಡ್ರೋನನ್ನು ನಿರ್ವಹಿಸಲು ಯಾವುದೇ ರಿಮೋಟ್ ಪೈಲಟ್ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ ಎಂದು ಗ್ಯಾಜೆಟ್ 360 ವರದಿ ಮಾಡಿದೆ.
ಡ್ರೋನ್ ನಿಯಮಗಳನ್ನು ತಿದ್ದುಪಡಿ ಮಾಡುವ ಅಧಿಸೂಚನೆಯನ್ನು ಸಚಿವಾಲಯವು ಹೊರಡಿಸಿದ್ದು ಫೆಬ್ರವರಿ 11 ರಿಂದ ಜಾರಿಗೆ ಬರುವಂತೆ ಡ್ರೋನ್ ಪೈಲಟ್ ಪರವಾನಗಿಯ ಅಗತ್ಯವನ್ನು ರದ್ದುಗೊಳಿಸಲಾಗಿದೆ.
ದೇಶದಲ್ಲಿ ಡ್ರೋನ್ಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಪ್ರಯತ್ನಗಳ ಭಾಗವಾಗಿ ಕೆಲವು ವಿನಾಯಿತಿಗಳೊಂದಿಗೆ ಸರ್ಕಾರವು ಡ್ರೋನ್ಗಳ ಆಮದನ್ನು ನಿಷೇಧಿಸಿದ ನಂತರ ಈಗ ಡ್ರೋನ್ ಪೈಲಟ್ ಪರವಾನಗಿ ಅಗತ್ಯವನ್ನು ಸರ್ಕಾರ ರದ್ದುಗೊಳಿಸಿದೆ.