ಹುಬ್ಬಳ್ಳಿ : ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಇಂಜಿನ್ ಇದ್ದರೂ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿ ಗುರುವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ಬಿಜೆಪಿಯವರು ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದರು.
ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ, ಮುಂದಿನ ಎಲ್ಲಾ ಚುನಾವಣೆಗೂ ದಿಕ್ಸೂಚಿ ಎಂದು ಹೇಳಲು ಆಗುವುದಿಲ್ಲ. ಉಪಚುನಾವಣೆ ಅನ್ನೋದು ಜನರಿಗೆ ತಮ್ಮ ನೋವು ಹೇಳಿಕೊಳ್ಳಲು ಇರುವ ಅವಕಾಶ ಎಂದರು.
ಆಡಳಿತ ಯಂತ್ರ ಕೂಡ ಬಹಳ ಬಿಗಿಯಾಗಿದೆ. ಬಿಜೆಪಿಯವರಿಗೆ ಅದು ಚೆನ್ನಾಗಿ ಗೊತ್ತಿದೆ. ಅವರು ಆಡಳಿತವನ್ನು ಯಾವುದೇ ರೀತಿ ದುರುಪಯೋಗ ಮಾಡಿಕೊಂಡರೂ ಮತದಾರರ ತೀರ್ಪು ಅಂತಿಮ. ಮತದಾರರು ಯಾವುದೇ ಒತ್ತಡಕ್ಕೆ ಹಾಗೂ ಆಮಿಷಕ್ಕೆ ಒಳಗಾಗುವುದಿಲ್ಲ ಎನ್ನುವ ನಂಬಿಕೆ ಇದೆ ಎಂದರು.
ರಾಜ್ಯ ಸರ್ಕಾರದ ಅವಧಿ ಇನ್ನೂ ಒಂದೂವರೆ ವರ್ಷ ಇದೆಯಾ ಎಂದು ಪ್ರಶ್ನಿಸಿದ ಶಿವಕುಮಾರ್ ಚುನಾವಣೆ ಬಗ್ಗೆ ಬಿಜೆಪಿಯವರನ್ನೇ ಕೇಳಿ ಎಂದರು. ಬಿಜೆಪಿಯವರ ಯಾವುದೇ ಮಾತುಗಳಲ್ಲಿ ನಂಬಿಕೆ ಇಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಉಪ ಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಅದು ಅವರ ರಾಜಕೀಯ ತಂತ್ರ.
ಅದರ ಬಗ್ಗೆ ನಾವು ಏನನ್ನೂ ಹೇಳಲ್ಲ. ಈ ಹಿಂದೆ ಹೈಕಮಾಂಡ್ ಸೂಚನೆಯಂತೆ ಜೆಡಿಎಸ್ ಗೆ ಬೆಂಬಲ ನೀಡಿದ್ದೆವು ಎಂದರು. ಜಾತ್ಯತೀತ ತತ್ವಗಳು ಒಂದೇ ಆಗಿರಲಿ ಅನ್ನುವುದು ನಮ್ಮ ಉದ್ದೇಶವಾಗಿತ್ತು. ಹೀಗಾಗಿ ಹಿಂದೆ ಬೆಂಬಲ ನೀಡಿದ್ದೆವು. ರಾಜ್ಯದ ಜನರಿಗೆ ಬಿಜೆಪಿ ಸರ್ಕಾರದಿಂದ ಒಳ್ಳೆಯದಾಗಲ್ಲ ಎಂದರು.