ನವದೆಹಲಿ: ಇಬ್ಬರು ನಾಯಕರು ಒಟ್ಟಾಗಿ ಕೆಲಸ ಮಾಡಿ, ರಾಜ್ಯ ಸರ್ಕಾರವನ್ನು ಸಮನ್ವಯದಿಂದ ಮುನ್ನಡೆಸಬೇಕೆಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿವಿಮಾತು ಹೇಳಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.
ಮಂಗಳವಾರ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಮಾತುಕತೆ ನಡೆಸಿದರು.
ಭೇಟಿ ವೇಳೆ ರಾಜ್ಯ ಘಟಕದೊಳಗೆ ಆಗುತ್ತಿರುವ ಗುಂಪುಗಾರಿಕೆ ಬಗ್ಗೆ ವರದಿಗಳು ಬಂದ ಹಿನ್ನೆಲೆ ರಾಹುಲ್ ಅವರು ಇಬ್ಬರು ನಾಯಕರುಗಳಿಗೆ ಒಟ್ಟಾಗಿ ಕೆಲಸ ಮಾಡಲು ಮತ್ತು ರಾಜ್ಯ ಸರ್ಕಾರವನ್ನು ಸಮನ್ವಯದಿಂದ ನಡೆಸುವಂತೆ ಹೇಳಿದರು ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.
ಇತ್ತೀಚೆಗಿನ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ನಿರೀಕ್ಷಿಸಿದಷ್ಟು ಸ್ಥಾನಗಳನ್ನು ಗೆಲ್ಲಲು ಏಕೆ ವಿಫಲವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ನಾಯಕರಿಗೆ ತಿಳಿಸಿದರು.