ಕೊಲಂಬೊ : ಶ್ರೀಲಂಕಾ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಅತ್ಯಂತ ಅಗತ್ಯ ಆಮದುಗಳಿಗೆ ಪಾವತಿಸಲು ವಿದೇಶಿ ಕರೆನ್ಸಿಯ ಕೊರತೆ ಕಾರಣದಿಂದಾಗಿ ದೇಶಾದ್ಯಂತ ಗುರುವಾರ ಡೀಸೆಲ್ ಮಾರಾಟ ಸ್ಥಗಿತಗೊಂಡಿದೆ.
ಶ್ರೀಲಂಕಾ ದೇಶದಾದ್ಯಂತ ಗುರುವಾರ ಡೀಸೆಲ್ ಮಾರಾಟವಾಗಲಿಲ್ಲ. ಸುಮಾರು 2.2 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಸಾರಿಗೆ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ದಕ್ಷಿಣ ಏಷ್ಯಾದ ರಾಷ್ಟ್ರವು ಸ್ವಾತಂತ್ರ್ಯದ ನಂತರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಬಸ್ ಮತ್ತು ವಾಣಿಜ್ಯ ವಾಹನಗಳಿಗೆ ಡೀಸೆಲ್ ಅತ್ಯಗತ್ಯ ಇಂಧನವಾಗಿದೆ.
ಆದರೆ ಬಂಕ್ಗಳಲ್ಲಿ ಡೀಸೆಲ್ ಮಾರಾಟ ಸ್ಥಗಿತಗೊಳಿಸಲಾಗಿದೆ. ಪೆಟ್ರೋಲ್ ಮಾರಾಟವಾಗುತ್ತಿದೆ. ಆದರೆ ಪೂರೈಕೆ ಕಡಿಮೆಯಾಗಿದೆ. ಪರಿಣಾಮವಾಗಿ ಜನರು ತಮ್ಮ ಕಾರುಗಳನ್ನು ರಸ್ತೆಯುದ್ದಕ್ಕೂ ಸರತಿ ಸಾಲಿನಲ್ಲಿ ನಿಲ್ಲಿಸಿ ತೊಂದರೆ ಅನುಭವಿಸುವಂತಾಗಿದೆ.
ರಿಪೇರಿಗಾಗಿ ಗ್ಯಾರೇಜ್ನಲ್ಲಿರುವ ಬಸ್ಗಳಿಂದ ನಾವು ಇಂಧನವನ್ನು ಹೊರತೆಗೆಯುತ್ತೇವೆ. ಆ ಡೀಸೆಲ್ನ್ನು ಅಗತ್ಯ ಸೇವೆಯ ವಾಹನಗಳನ್ನು ಚಲಾಯಿಸಲು ಬಳಸುತ್ತೇವೆ ಎಂದು ಸಾರಿಗೆ ಸಚಿವ ದಿಲುಮ್ ಅಮುನುಗಮ ಪ್ರತಿಕ್ರಿಯಿಸಿದ್ದಾರೆ.